ಬೆಲೆ ಏರಿಕೆಯ ವಿರುದ್ಧ ಎ.28ರಿಂದ ಮೂರು ದಿನಗಳ ಕಾಲ ಹೋರಾಟ: ಆರ್.ಅಶೋಕ್

Update: 2025-04-25 15:48 IST
Photo of R. Ashok

ಆರ್‌.ಅಶೋಕ್ 

  • whatsapp icon

ಬೆಂಗಳೂರು: ಕಾಂಗ್ರೆಸ್ ಸರಕಾರ ಮಾಡಿರುವ ಬೆಲೆ ಏರಿಕೆಯ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಲಯ ಆಯುಕ್ತರ ಕಚೇರಿಯ ಮುಂದೆ ಎ.28 ರಿಂದ ಮೂರು ದಿನಗಳ ಕಾಲ ಹೋರಾಟ ಮಾಡಲಾಗುತ್ತದೆ. ಹಾಲು, ವಿದ್ಯುತ್ ಹಾಗೂ ಆಸ್ತಿ ತೆರಿಗೆ ಹಾಗೂ ಪಾರ್ಕಿಂಗ್ ಶುಲ್ಕದ ಬಗ್ಗೆ ಹೋರಾಟ ಮಾಡಲಾಗುವುದು. ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್ ಭರಪೂರ ತೆರಿಗೆಗಳನ್ನು ಹೇರಿದೆ. ಪ್ರತಿ ಮನೆಗಳಿಗೆ ಹೋಗಿ ಕರಪತ್ರ ಹಂಚಲಾಗುವುದು. ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮುಂದೂಡುತ್ತಿದೆ. ಈ ಬಗ್ಗೆ ಕೂಡ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಜೊತೆ ಚರ್ಚಿಸಲಾಗಿದೆ. ಈ ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ತೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇದು ಅಸಂವಿಧಾನಿಕವಾದ ಕ್ರಮ ಎಂದು ಅಶೋಕ್ ಹೇಳಿದರು.

ಗ್ರೇಟರ್ ಬೆಂಗಳೂರು ವಿಧೇಯಕದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್ ಪರ ಎನ್ನುತ್ತಾರೆ, ಸಹಿ ಹಾಕದೇ ಇದ್ದರೆ ಅದು ಬಿಜೆಪಿ ಕಚೇರಿ ಎಂದು ಟೀಕಿಸುತ್ತಾರೆ ಎಂದರು.

ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಅಧಿವೇಶನದಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ತೀರ್ಪು ಬಂದ ಮೇಲೆ ಮರು ಪರೀಕ್ಷೆ ಬಗ್ಗೆ ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸಿ ಮುಂದೆ ಅಗತ್ಯಬಿದ್ದರೆ ಮುಂದೆಯೂ ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ನಾಯಕರು ದೇಶದ ಯೋಧರ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಮತ್ತೆ ಇವರಿಗೆ ಯಾರ ಮೇಲೆ ನಂಬಿಕೆ ಇದೆ? ಇಡೀ ದೇಶ ಒಂದಾಗಿ ಭಯೋತ್ಪಾದಕ ದಾಳಿಯನ್ನು ಖಂಡಿಸಬೇಕು. ಉಗ್ರರು ಹಿಂದೂ ಎಂದು ಹೇಳಿಯೇ ಹುಡುಕಿ ಕೊಂದಿದ್ದಾರೆ. ಬೇಹುಗಾರಿಕೆ ಸರಿಯಲ್ಲ, ಯೋಧರು ಸರಿಯಲ್ಲ ಎಂದು ಟೀಕೆ ಮಾಡುವುದು ಸರಿಯಿಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾದಾಗ ಯಾರು ವಿಫಲರಾಗಿದ್ದರು? ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಯಾರು ವಿಫಲರಾಗಿದ್ದರು? ಸಚಿವರ ವಿರುದ್ಧ ಹನಿಟ್ರ್ಯಾಪ್ ನಡೆಯುತ್ತಿರುವಾಗ ಯಾರು ವಿಫಲರಾಗಿದ್ದಾರೆ? ಇಂತಹ ಕಾಂಗ್ರೆಸ್ ಪಕ್ಷ ದೇಶದ ಯೋಧರ ಬಗ್ಗೆ ಮಾತಾಡುವುದು ಬೇಡ ಎಂದರು.

ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್ಗಳನ್ನು ಮಟ್ಟ ಹಾಕಬೇಕಿದೆ. ಅವರಿಗೆ ನೆರವು ಕೊಡುವುದು, ಬೇಲ್ ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಕೂಡ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News