ನಾಳೆ(ಜೂ.24) ಬೀದರ್‌ನಲ್ಲಿ ‘ವಕ್ಫ್ ಅದಾಲತ್’ಗೆ ಚಾಲನೆ : ಸಚಿವ ಝಮೀರ್ ಅಹ್ಮದ್

Update: 2024-06-23 14:41 GMT

ಝಮೀರ್ ಅಹ್ಮದ್ ಖಾನ್

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ತೆರವು ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬೀದರ್ ನಲ್ಲಿ ಸೋಮವಾರ(ಜೂ.24) ವಕ್ಫ್ ಅದಾಲತ್ ನಡೆಯಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಕ್ಫ್ ಅದಾಲತ್‍ನಲ್ಲಿ ಜಿಲ್ಲಾ ಮಟ್ಟದಲ್ಲಿರುವ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಹಾಗೂ ವಕ್ಫ್ ಸಮಿತಿಗಳ ಸಮಸ್ಯೆಗಳ ಕುಂದು ಕೊರತೆಗಳನ್ನು ಆಲಿಸಲಾಗುವುದು ಎಂದು ಹೇಳಿದ್ದಾರೆ.

ವಕ್ಫ್ ಅದಾಲತ್ ನ ಮುಂದುವರಿದ ಭಾಗವಾಗಿ ಮಂಗಳವಾರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಬೋರ್ಡ್ ಅಧಿಕಾರಿಗಳ ಜತೆ ಸಭೆ ನಡೆಯಲಿದೆ. ಬಹಳ ಕಾಲದಿಂದ ಇತ್ಯರ್ಥ ವಾಗದ ವಕ್ಫ್ ಆಸ್ತಿಗಳಿಗೆ ಖಾತಾ ಮಾಡಿಕೊಡುವ ಬಗ್ಗೆಯೂ ಅರ್ಜಿ ಸ್ವೀಕಾರ ಮಾಡಿ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾನು ಸಚಿವನಾದ ನಂತರ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಅಲ್ಲೇ ಇತ್ಯರ್ಥ ಪಡಿಸುವುದಾಗಿ ತಿಳಿಸಿದ್ದೆ. ಅದರಂತೆ ಬೀದರ್ ನಿಂದ ವಕ್ಫ್ ಅದಾಲತ್ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ವಕ್ಫ್ ಅದಾಲತ್ ಅನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಬೀದರ್ ನಲ್ಲಿ ನಡೆಯಲಿರುವ ವಕ್ಫ್ ಅದಾಲತ್‍ನಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಬೀದರ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಫಿರೋಝ್ ಖಾನ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News