ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಕಾರ್ಮಿಕರಿಬ್ಬರು ಸಜೀವ ದಹನ

Photo credit: thehindu.com
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಸಜೀವನ ದಹನವಾಗಿರುವ ಘಟನೆ ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬೆಂಗಳೂರು ಉತ್ತರ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಮೃತ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ.
ಗುತ್ತಿಗೆದಾರ ಮತ್ತು ಇಂಜಿನಿಯರ್ ಸತೀಶ್‍ಗೆ ಸೇರಿದ ಶಿವಾನಿ ಗ್ರೀನ್ ಲೇಔಟ್‍ನಲ್ಲಿರುವ 3 ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಈ ಘಟನೆ ನಡೆದಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ವುಡ್ ವಕ್ರ್ಸ್ ಕೆಲಸ ಮಾಡಲಾಗುತ್ತಿತ್ತು. ಮರ ಫಾಲೀಷ್ ಮಾಡಲು ಥಿನ್ನರ್ ಬಳಕೆ ಮಾಡಲಾಗಿದೆ. ಕೆಮಿಕಲ್ ಕೂಡ ಸಮೀಪದಲ್ಲೇ ಇದ್ದ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ ಎನ್ನುವ ಮಾಹಿತಿ ಗೊತ್ತಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.