ರಾಜಕೀಯ ಅಸ್ತಿತ್ವಕ್ಕಾಗಿ ಶ್ರೀಕಾಂತ್ ಪೂಜಾರಿ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ: ರಮೇಶ್ ಬಾಬು ಆರೋಪ

Update: 2024-01-03 15:57 GMT

ಬೆಂಗಳೂರು: ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ  ನ್ಯಾಯಾಂಗ ಬಂಧನವನ್ನು ಟೀಕೆ ಮಾಡುತ್ತಿದ್ದು, ತಮ್ಮ ಲೋಕಸಭಾ ಚುನಾವಣೆಗೆ ಇದನ್ನು ಬಳಸಿಕೊಳ್ಳುವ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು  ಆರೋಪ ಮಾಡಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು, ಆರೋಪಿ ಜಾಮೀನು ಪಡೆದುಕೊಳ್ಳದಂತೆ ತಾಕೀತು ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 2023ನೆ ಸಾಲಿನಲ್ಲಿ ಒಟ್ಟು 26 ಎಲ್‍ಪಿಆರ್ ಪ್ರಕರಣಗಳಲ್ಲಿ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟು ಪೊಲೀಸ್ ಇಲಾಖೆ ಪ್ರತಿವರ್ಷ ಹಳೆಯ ಪ್ರಕರಣಗಳ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣಗಳ ವಿಚಾರಣೆ ಮುಕ್ತಾಯಗೊಳಿಸುತ್ತದೆ. ತಲೆಮರೆಸಿಕೊಂಡ ಆರೋಪಿಗಳ ಪ್ರಕರಣದಲ್ಲಿ ವಿಚಾರಣೆ ಇಲ್ಲದೆ ಬಾಕಿ ಪ್ರಕರಣಗಳು ಅಂತಿಮಗೊಳ್ಳುವುದಿಲ್ಲ’ ಎಂದು ಅವರು ವಿವರಣೆ ನೀಡಿದರು.

ಹುಬ್ಬಳ್ಳಿ ಶಹರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಸನ್ 143, 147, 427, 436 ರೆಡ್‍ವಿತ್ 149ರ ಅಡಿಯಲ್ಲಿ ಆರೋಪಿ ಶ್ರೀಕಾಂತ್ ಪೂಜಾರಿ ಸೇರಿದಂತೆ 13 ಮಂದಿ ಆರೋಪಿಗಳ ವಿರುದ್ಧ (ದೊಂಬಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಕ್ಕೆ ಸಂಬಂಧಪಟ್ಟ ಪ್ರಕರಣ) ದಾಖಲಾಗಿರುತ್ತದೆ. ಇದರಲ್ಲಿ 5 ಜನ ಆರೋಪಿಗಳು ಖುಲಾಸೆಗೊಂಡಿದ್ದು, 5ಜನ ಮೃತಪಟ್ಟಿದ್ದು, ಮೂವರು ತಲೆಮರೆಸಿಕೊಂಡಿದ್ದರು ಎಂದು ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News