ನಾವು ಅಧಿಕಾರಕ್ಕೆ ಬಂದು ‘ಗ್ರೇಟರ್ ಬೆಂಗಳೂರು ಕಾಯ್ದೆ’ ವಾಪಸ್ ಪಡೆಯುತ್ತೇವೆ : ವಿ.ಸೋಮಣ್ಣ
ಬೆಂಗಳೂರು : ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಆನಂತರ ನಾವೇ ಅಧಿಕಾರಕ್ಕೆ ಬಂದು ಬಿಬಿಎಂಪಿಗೆ ಚುನಾವಣೆ ನಡೆಸುವುದು ಮಾತ್ರವಲ್ಲದೆ, ಗ್ರೇಟರ್ ಬೆಂಗಳೂರು ಕಾಯ್ದೆ ವಾಪಸ್ ಪಡೆಯುವುದಾಗಿ ಪರೋಕ್ಷವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲದಿರುವುದನ್ನು ಇದೆ ಎಂದು ಬಿಂಬಿಸಲು ಕಾಂಗ್ರೆಸ್ ಸರಕಾರ ಹೊರಟಿದೆ. ಜತೆಗೆ, ಗ್ರೇಟರ್ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರಲಿದ್ದು, ಆಗ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಈಗಾಗಲೇ ಅವರೂ ಕೂಡ ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ಯೋಜನೆ ಕೂಡಾ ಬರುತ್ತಿದೆ. ಇದರ ಜೊತೆ ರೈಲು ಸೇವೆಯೂ ಬೇಕಾ ಬೇಡವಾ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಜಾತಿ ಜನಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈಗಿನ ವರದಿ ಪಾರದರ್ಶಕವಾಗಿ ಮಾಡಿಲ್ಲ. ರಾಜ್ಯದ ಜನರ ಭಾವನೆಗಳಿಗೆ ಈ ವರದಿ ನೋವು ತಂದಿದೆ. ಈ ವರದಿ ಮೂಲಕ ರಾಜ್ಯದ ಜನರ ಜತೆ ಸರಕಾರ ಆಟ ಆಡುವ ಕೆಲಸ ಮಾಡೋದು ಬೇಡ. ಈ ವರದಿಗೆ ಕಾಂತರಾಜ್ ಅವರು ಸಹಿ ಹಾಕದೇ ಓಡಿ ಹೋದರು. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ವಾಪಸ್ ಪಡೆದು ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲಿ ಎಂದರು.
ನಾನು ಇಷ್ಟು ಕೆಲಸ ಮಾಡುತ್ತೇನೆ ಎಂದು ಕೊಂಡಿರಲಿಲ್ಲ. ಕೇಂದ್ರ ಸಚಿವನಾಗಿ ನನ್ನ ಕೊನೆಯ ಇನ್ನಿಂಗ್ಸ್ ಇದು. ಕೊನೆಯ ಇನಿಂಗ್ಸ್ ನಲ್ಲಿ ಒಳ್ಳೆಯ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದ ಅವರು, ಹೊಸದಿಲ್ಲಿಯ ಸಂಸತ್ ಭವನದ ಆವರಣದಲ್ಲಿ ಬಸವ ಜಯಂತಿಯನ್ನು ಎ.30ರ ಬೆಳಗ್ಗೆ 8 ಗಂಟೆಗೆ ಆಚರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಸಿ.ಆರ್.ಪಾಟೀಲ್, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಅಶ್ವಿನಿ ವೈಷ್ಣವ್ ಸೇರಿದಂತೆ ಹಿರಿಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.