ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ : ಸಚಿವ ಬಿ.ನಾಗೇಂದ್ರ ಹೇಳಿದ್ದೇನು?

Update: 2024-05-28 13:01 GMT

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಏಕೆ ತಳುಕು ಹಾಕಲಾಗಿದೆ ಎಂಬುವುದೇ ನನಗೆ ಗೊತ್ತಿಲ್ಲ. ಆದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಪ್ರಕರಣ ಬಗ್ಗೆ ಮುಖ್ಯಮಂತ್ರಿ ಸಹ ಮಾಹಿತಿ ಪಡೆದುಕೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಸಹಿಯನ್ನು ವಿಧಿವಿಜ್ಞಾನ ಪ್ರಾಯೋಗಾಲಯಕ್ಕೆ (ಎಫ್‍ಎಸ್‍ಎಲ್) ರವಾನಿಸಲಾಗಿದೆ. ಈ ಸಹಿ ಎಂಡಿ ಅವರದ್ದೇ ಎಂದು ದೃಢಪಟ್ಟರೆ, ಅವರನ್ನೂ ಕೂಡ ವಜಾ ಮಾಡುತ್ತೇವೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುವುದನ್ನು ಪತ್ತೆ ಹೆಚ್ಚುತ್ತೇವೆ. ಇಂದು ಬೆಳಗ್ಗೆಯಿಂದಲೇ ಸಿಐಡಿ ತನಿಖೆ ಮಾಡುತ್ತಿದೆ. ಎಂಡಿ ಸೇರಿದಂತೆ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದ ಅವರು, ಬಿಜೆಪಿಯವರ ಪ್ರಕಾರ, ನನ್ನ ರಾಜೀನಾಮೆ ಕೇಳುವುದು ಸರಿ ಇರಬಹುದು. ಆದರೆ, ನನ್ನ ಹೆಸರು ಯಾಕೆ ತಳುಕು ಹಾಕಿದ್ದಾರೆ ಎಂಬುವುದೇ ನನಗೆ ಗೊತ್ತಿಲ್ಲ. ಇದು ನನ್ನ ವ್ಯಾಪ್ತಿಯೇ ಇಲ್ಲ. ಈ ಬಗ್ಗೆ ಸಿಐಡಿಗೆ ತನಿಖೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಿಗಮದ ಎಂಡಿ ಬಗ್ಗೆ ಯಾವುದೇ ಮೃದು ಸ್ವಭಾವ ಇಲ್ಲ. ನಿಜವಾಗಿಯೂ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಚುನಾವಣಾ ನೀತಿ ಸಂಹಿತೆ ಇದ್ದಾಗ ಕಾರಣ ಯಾವುದೇ ಸಭೆ ಮಾಡಿಲ್ಲ. ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಬೇಕಾದರೆ, ಬೋರ್ಡ್ ಮೀಟಿಂಗ್ ಮಾಡಬೇಕು. ಯಾವುದೇ ಬೋರ್ಡ್ ಮೀಟಿಂಗ್ ಕೂಡ ನಡೆದಿಲ್ಲ. ಬ್ಯಾಂಕ್ ಅಧಿಕಾರಿಗಳು ಕೂಡ ಸಬ್ ಅಕೌಂಟ್ ಮಾಡಿದ್ದಾರೆ.

ಇನ್ನೂ, ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ ಕೂಡ ಇದನ್ನು ಎಂಡಿ ಗಮನಕ್ಕೆ ತಂದಿಲ್ಲ. ಎಂಡಿ ಮೊಬೈಲ್‍ಗೂ ಕೂಡ ನಗದು ವಹಿವಾಟಿನ ಮೆಸೇಜ್ ಬಂದಿಲ್ಲ ಎಂದಿದ್ದಾರೆ. ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಿಐಡಿ ವರದಿ ಆಧರಿಸಿ ಎಂಡಿ ಸೇರಿದಂತೆ ಎಲ್ಲರ ಮೇಲೆ ಕ್ರಮ ಆಗಲಿದೆ ಎಂದು ನಾಗೇಂದ್ರ ವಿವರಿಸಿದರು.

‘ಎಲ್ಲ ಹಣ ದುರುಪಯೋಗ ಆಗಿದೆ ಎಂಬ ವಿಷಯ ಗೊತ್ತಾಗಿದ್ದು, ಹಣ ಯಾವ ರೀತಿ ದುರುಪಯೋಗ ಆಗಿದೆ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ಒಂದು ಬ್ಯಾಂಕ್‍ನಿಂದ ಇನ್ನೊಂದು ಬ್ಯಾಂಕ್‍ಗೆ ಹಣ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿದ್ದು ಕೂಡ ಎಂಡಿ ಗಮನಕ್ಕೆ ಬಂದಿಲ್ಲ. ಬ್ಯಾಂಕ್‍ನವರು ಹಣದ ಮೊತ್ತವನ್ನು ನಮ್ಮ ನಿಗಮದ ಖಾತೆಗೆ ಮರು ವರ್ಗಾವಣೆ ಮಾಡಲು ಪ್ರಕ್ರಿಯೆ ಪ್ರಾರಂಭ ಮಾಡಿದ್ದೇವೆ’ ಎಂದು ಸಚಿವ ನಾಗೇಂದ್ರ ಹೇಳಿದರು.

ಬ್ಯಾಂಕ್ ಅಧಿಕಾರಿಗಳಿಗೆ ಗಡುವು: ‘ಈ ಕುರಿತು ನಿಗಮದ ಎಂಡಿ ದೂರು ಕೊಟ್ಟಿದ್ದಾರೆ. ಇಂದು ಸಂಜೆಯೊಳಗೆ ನಿಗಮದ ಖಾತೆಗೆ ಅಷ್ಟೂ ಹಣ ವಾಪಸ್ ಬರಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಗಡುವು ಮೀರಿದರೆ ಬ್ಯಾಂಕ್‍ನ ಹಿರಿಯ ಅಧಿಕಾರಿಗಳ ಮೇಲೂ ಕೂಡ ಎಫ್‍ಐಆರ್ ದಾಖಲು ಮಾಡುತ್ತೇವೆ. ಇಷ್ಟು ದೊಡ್ಡ ಜವಾಬ್ದಾರಿ ಸಣ್ಣ ಅಧಿಕಾರಿಗೆ ಹೇಗೆ ನೀಡಲಾಯಿತು?. ಯಾರದಾದರೂ ಒತ್ತಡ ಇತ್ತೇ ಎಂಬುದರ ತನಿಖೆ ನಡೆಯುತ್ತಿದೆ’ ಎಂದು ನಾಗೇಂದ್ರ ವಿವರಿಸಿದರು.

"ಈಗಾಗಲೇ 88 ಕೋಟಿ ಹಣದ ಪೈಕಿ 28 ಕೋಟಿ ಹಣವು ನಮ್ಮ ನಿಗಮದ ಖಾತೆಗೆ ಮರುಪಾವತಿ ಆಗಿದೆ ಇನ್ನುಳಿದ ಸುಮಾರು 60ಕೋಟಿ ಹಣವನ್ನು ಅತೀ ಶೀಘ್ರದಲ್ಲಿ ವಾಪಸ್ ಪಡೆಯುತ್ತೇವೆ ಬಡವರ ಕಲ್ಯಾಣಕ್ಕೆ ಮಿಸಲಿಟ್ಟ ಹಣವನ್ನು ಕಾನೂನು ಬಾಹಿರವಾಗಿ ಯಾರು ಪಡೆಯದಂತೆ ಕಾಪಾಡುವುದು ನನ್ನ ಹಾಗೂ ನಿಗಮದ ಅಧ್ಯಕ್ಷರ ಆದ್ಯ ಕರ್ತವ್ಯವಾಗಿದೆ"

ಬಿ.ನಾಗೇಂದ್ರ, ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News