ಬಸವಣ್ಣನವರ ಕುರಿತು ವಿವಾದಾತ್ಮಕ ಹೇಳಿಕೆ | ಯತ್ನಾಳ್ ಶರಣರಿಗೆ ಕ್ಷಮೆ ಕೇಳಬೇಕು : ಬಸವಯೋಗಿ ಸ್ವಾಮೀಜಿ

Update: 2024-12-03 13:03 GMT

ಬಸನಗೌಡ ಪಾಟೀಲ್‌ ಯತ್ನಾಳ್

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ರಾಜಕೀಯ ಲಾಭಕ್ಕಾಗಿ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವುದು, ಬಸವಾದಿ ಶರಣರಿಗೆ ಮತ್ತು ಬಸವ ತತ್ವ ಅನುಯಾಯಿಗಳಿಗೆ ನೋವುಂಟಾಗಿದೆ. ಈ ಕೂಡಲೇ ಅವರು ಕ್ಷಮೆ ಕೇಳಬೇಕು, ಇಲ್ಲದ್ದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಬಸವಯೋಗಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಯಂ ಸ್ಫೂರ್ತಿಯ ದೇಹ ವಿಸರ್ಜನೆ ಎಂದರೆ ಆತ್ಮಹತ್ಯೆ ಎಂದು ತಪ್ಪು ಅರ್ಥ ಕಲ್ಪಿಸಬಾರದು. ಆತ್ಮಹತ್ಯೆಯಲ್ಲಿ ಬಾಳಬಾರದ ಹೇಡಿತನವಿದ್ದರೆ, ಇಚ್ಚಾಮರಣದಲ್ಲಿ ಯೋಗ, ಸಂಕಲ್ಪ ಶಕ್ತಿಯಿಂದ ಪರಮಾತ್ಮನನ್ನು ಬೆರೆಯುವ ಪ್ರಯತ್ನವಿರುತ್ತದೆ. ಇಂತಹ ಇತಿಹಾಸ, ಸಂಸ್ಕೃತಿ ನಮ್ಮದಾಗಿರುವಾಗ ಅಹಂಕಾರ, ಮದತುಂಬಿದ ನಾಲಿಗೆಯಿಂದ ಬಸವಣ್ಣರನ್ನು ಅವಮಾನಿಸಿರುವುದು ನಾಡಿಗೆ ಅವಮಾನ ಮಾಡಿದಂತಾಗಿದೆ ಎಂದರು.

ಬಸವಣ್ಣ ಚಿಕ್ಕ ವಯಸ್ಸಿನಿಂದಲೂ ಧೈರ್ಯಶಾಲಿಯೂ, ಜ್ಞಾನಿಯೂ ಆಗಿದ್ದರು. ಸಮಾನತೆಗಾಗಿ ಅಧಿಕಾರ ಶಾಹಿಯಲ್ಲಿದ್ದ ಪಟ್ಟಭದ್ರ ಹಾಗೂ ಸಂಪ್ರದಾಯವಾದಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದವರು. ಸಮಾಜದಲ್ಲಿದ್ದ ಜಾತಿ, ವರ್ಣ, ವರ್ಗ, ಲಿಂಗ ಭೇದಗಳನ್ನು ತೊಡೆದು ಹಾಕಲು ಹೋರಾಟಗಳನ್ನು ಮಾಡಿದವರು. ಅನುಭವ ಮಂಟಪವೆಂಬ ಸರ್ವತೋಮುಖಿ ಸಂಸ್ಥೆ ಸ್ಥಾಪಿಸಿ ದಲಿತರ ಉದ್ದಾರಕ್ಕೆ ಶ್ರಮಿಸಿದವರು ಎಂದು ಅವರು ಹೇಳಿದರು.

ಬಸವಣ್ಣರ ಬಗ್ಗೆ ಅಹಂಕಾರದಿಂದ ಕೆಟ್ಟ ಸಂದೇಶ ಕೊಡುವ ರೀತಿಯಲ್ಲಿ, ಮಾತನಾಡಿ ನಾಡಿನ ಬಸವಾದಿ ಶರಣರಿಗೆ ಮತ್ತು ಅವರ ಅನುಯಾಯಿಗಳಿಗೆ ನೋವುಂಟು ಮಾಡಿದ್ದಾರೆ. ಬಸನಗೌಡ ಪಾಟೀಲ್ ನಾಡಿನ ಜನಕ್ಕೆ ಕ್ಷಮೆ ಯಾಚಿಸದೆ ಇದ್ದರೆ ಪ್ರತಿಭಟನೆ ನಡೆಲಾಗುವುದು ಎಂದು ಬಸವಯೋಗಿ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವ ದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್., ರಾಜ್ಯಾಧ್ಯಕ್ಷ ಕೆ.ವೀರೇಶ್, ಜಿಲ್ಲಾಧ್ಯಕ್ಷ ಕೆ.ಆ.ಜಗದೀಶ್, ಕಾರ್ಯದರ್ಶಿ ಪ್ರವೀಣ ಕೋಚ್ಚಕಿ ಹಾಗೂ ಈಶ್ವರ್ ಲಿಂಗಾಯುತ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News