ಅಲ್ಪಸಂಖ್ಯಾತರ ಪ್ರಗತಿಗೆ ಎಲ್ಲ ಜನಾಂಗಗಳ ಸಹಕಾರ ಬೇಕು: ಝಮೀರ್ ಅಹ್ಮದ್ ಖಾನ್

Update: 2025-02-22 21:19 IST
ಅಲ್ಪಸಂಖ್ಯಾತರ ಪ್ರಗತಿಗೆ ಎಲ್ಲ ಜನಾಂಗಗಳ ಸಹಕಾರ ಬೇಕು: ಝಮೀರ್ ಅಹ್ಮದ್ ಖಾನ್
  • whatsapp icon

ಬೆಂಗಳೂರು : ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಬೇಕಾದರೆ, ಎಲ್ಲ ಜಾತಿ ಜನಾಂಗಗಳ ಸಹಕಾರ ಅಗತ್ಯವಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಶನಿವಾರ ನಗರದ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಹಮ್ಮಿಕೊಂಡಿದ್ದಅಂತರ್‌ ರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಅಭಿವೃದ್ಧಿಯಾಗಬೇಕಾದರೆ ಬಹುಸಂಖ್ಯಾತರ ಸಹಕಾರ ಅತ್ಯವಶ್ಯಕವಾಗಿರುತ್ತದೆ ಎಂದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಕಲ್ಪಿಸಿರುವ ಹಕ್ಕುಗಳು, ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಿದರೆ ಮಾತ್ರ ಈ ಸಮುದಾಯಗಳು ಅಭಿವೃದ್ಧಿ ಮತ್ತು ಶಾಂತಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಮಾತನಾಡಿ, ಪ್ರತಿ ರಾಷ್ಟ್ರವು ವಿಭಿನ್ನ ಜನಾಂಗೀಯ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಗುಂಪನ್ನು ಹೊಂದಿದೆ ಎಂಬುದರಲ್ಲಿ ಸಂಶಯವಿಲ್ಲ. ಭಾರತದ ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಒದಗಿಸುತ್ತದೆ. ಜತೆಗೆ, ಭಾಷಾ, ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ನುಡಿದರು.

ಸಮಾಜದಲ್ಲಿ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ದೊರೆಯುವಂತೆ ಮಾಡಿ ಎಲ್ಲರಲ್ಲೂ ಸೌಹಾರ್ದತೆ ಮೂಡಿಸುವ ವಾತಾವರಣ ಸೃಷ್ಟಿಸಲು ಎಲ್ಲ ಸಮುದಾಯಗಳ ಮುಖಂಡರ ಸಲಹೆಗಳನ್ನು ಪಡೆದು ಆಯೋಗ ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿದೆ. ಜತೆಗೆ, ಅಲ್ಪಸಂಖ್ಯಾತರ ಮಕ್ಕಳಿಗೆ ಉದ್ಯೋಗ ದೊರೆಯುವಂತೆ ಮಾಡಲು ಹಲವು ಕಡೆ ಸರಣಿ ಮೇಳಗಳನ್ನು ಆಯೋಜನೆಗಳನ್ನು ಮಾಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ಅವರು ನೀಡಿದರು.

ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಆರ್ಚ್‍ಬಿಷಪ್ ಡಾ.ಪೀಟರ್ ಮಚಾದೊ, ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ಮೌಲಾನಾ ಝೈನುಲ್ ಆಬಿದೀನ್, ಸಿಖ್, ಜೈನ ಹಾಗೂ ಬೌದ್ಧ ಸಮುದಾಯದ ಧರ್ಮಗುರುಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಡಾ.ಮಾಜುದ್ದೀನ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News