ರಾಜ್ಯಪಾಲರ ಭಾಷಣ ಸರಕಾರದ ಬದ್ಧತೆಗೆ ಸಾಕ್ಷಿ : ಝಮೀರ್ ಅಹ್ಮದ್ ಖಾನ್

Update: 2025-03-03 19:14 IST
ರಾಜ್ಯಪಾಲರ ಭಾಷಣ ಸರಕಾರದ ಬದ್ಧತೆಗೆ ಸಾಕ್ಷಿ : ಝಮೀರ್ ಅಹ್ಮದ್ ಖಾನ್

ಝಮೀರ್ ಅಹ್ಮದ್ ಖಾನ್

  • whatsapp icon

ಬೆಂಗಳೂರು : ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬದ್ಧತೆಗೆ ಸಾಕ್ಷಿ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಬಡ ಕುಟುಂಬಗಳಿಗೆ ತಲುಪುತ್ತಿರುವ ಬಗ್ಗೆ ಅಂಕಿ-ಅಂಶ ಸಮೇತ ವಿವರಿಸಿ ಮುಂದೆಯೂ ಅನುಷ್ಠಾನ ಖಾತರಿ ನೀಡಲಾಗಿದ್ದು, ಯೋಜನೆಗಳು ಮುಂದುವರಿಯುವುದಿಲ್ಲ ಎಂದು ಸುಳ್ಳು ಹಬ್ಬಿಸುತ್ತಿರುವ ಪ್ರತಿಪಕ್ಷ ಬಿಜೆಪಿಯವರಿಗೆ ಉತ್ತರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೈಗಾರಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವುದು, ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ವಿಶ್ವವೇ ಕೊಂಡಾಡುತ್ತಿರುವ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆ ಬಗ್ಗೆಯೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಸತಿ ಇಲಾಖೆಯಲ್ಲಿ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 1.18,359 ಮನೆಗಳ ವಿತರಣೆಗೆ ಕ್ರಮ ಕೈಗೊಂಡು, ಫಲಾನುಭವಿಗಳ ಪಾಲಿನ ವಂತಿಗೆ ತಲಾ ನಾಲ್ಕು ಲಕ್ಷ ರೂ. ಸರಕಾರವೇ ಭರಿಸುವ ತೀರ್ಮಾನ ಕೈಗೊಂಡು ಮೊದಲ ಹಂತದಲ್ಲಿ 36,789 ಮನೆ ಹಂಚಿಕೆ ಮಾಡಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಸದ್ಯದಲ್ಲೇ ಎರಡನೇ ಹಂತದಲ್ಲಿ 39,843 ಮನೆ ವಿತರಣೆಗೆ ಸಿದ್ಧತೆ ಮಾಡಿದ್ದು, 1,66,867 ಬಡ ಕುಟುಂಬಗಳಿಗೆ ಸ್ಲಂ ಬೋರ್ಡ್ ನಿಂದ ಹಕ್ಕುಪತ್ರ ವಿತರಿಸಿರುವುದು ಸರಕಾರದ ಸಾಧನೆ ಆಗಿದೆ. ಒಟ್ಟಾರೆ ರಾಜ್ಯಪಾಲರ ಭಾಷಣವು ನಮ್ಮ ಸರಕಾರದ ಸಾಧನೆಯ ಶ್ವೇತಪತ್ರ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News