ಅನಧಿಕೃತ ಔಷಧ ಅಂಗಡಿಗಳ ವಿರುದ್ಧ ಕ್ರಮ : ಸಚಿವ ದಿನೇಶ್ ಗುಂಡೂರಾವ್

Update: 2024-12-09 14:19 GMT

ಬೆಳಗಾವಿ : ರಾಜ್ಯದಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಔಷಧ ಅಂಗಡಿಗಳನ್ನು ನಡೆಸುತ್ತಿರುವವರ ವಿರುದ್ಧ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪ್ರಸ್ತುತ 37,130 ಖಾಸಗಿ ಔಷಧ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಸರಕಾರಿ ಆಸ್ಪತ್ರೆ ಆವರಣದಲ್ಲಿ 07 ಜನತಾ ಬಜಾರ್‌ ಗಳು, 23 ಜನ ಸಂಜೀವಿನಿ ಕೇಂದ್ರಗಳು ಹಾಗೂ 178 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

2023-24ರಲ್ಲಿ ದೈನಂದಿನ ಪರಿವೀಕ್ಷಣೆಯಲ್ಲಿ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ 1245 ಪರವಾನಿಗೆಗಳನ್ನು ಅಮಾನತ್ತುಗೊಳಿಸಿದ್ದು, 292 ಪರವಾನಿಗೆಗಳನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಮಾದಕ ಔಷಧಿಗಳ ದಾಸ್ತಾನು ಮತ್ತು ಮಾರಾಟಗಳ ಬಗ್ಗೆ ನಿಗಾವಹಿಸಿದ್ದಾರೆ ಎಂದರು.

ಖಾಸಗಿ ಔಷಧ ಮಳಿಗೆಗಳಲ್ಲಿ ಮಾದಕ ವಸ್ತುಗಳು ನಿಯಾಮಬಾಹಿರ ಮಾರಾಟಗಳ ಬಗ್ಗೆ ಪರಿವೀಕ್ಷಣೆಗಳನ್ನು ಕೈಗೊಂಡು ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಆರೋಗ್ಯ ಇಲಾಖೆಯಲ್ಲಿ ಪ್ರತಿ ವರ್ಷ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 3 ದಿನ ವಿಶೇಷ ಪರೀಕ್ಷಾರ್ಥ ಪರಿವೀಕ್ಷಣೆ ಕೈಗೊಂಡು ಉಲ್ಲಂಘನೆ ಕಂಡುಬಂದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಔಷಧಗಳ-ಕಾಂತಿವರ್ಧಕ ತಯಾರಕರು ಔಷಧ ಮತ್ತು ಅಧಿನಿಯಮ ಮತ್ತು ನಿಯಮಾವಳಿಗಳ ಪ್ರಕಾರ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡುವ ಮುಂಚಿತವಾಗಿ ಎಲ್ಲಾ ಔಷಧಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡ ನಂತರವೇ ಮಾರುಕಟ್ಟೆಗೆ ಸರಬರಾಜು ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟದ ಬಗ್ಗೆ ನಿಗಾವಹಿಸಿ ಅವುಗಳ ಮಾದರಿಗಳನ್ನು ಔಷಧ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವ ಮೂಲಕ ಆಸ್ಪತ್ರೆ, ನರ್ಸಿಂಗ್‌ ಹೋಂ ಮತ್ತು ಕ್ಲಿನಿಕ್‍ಗಳಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

83 ಹುದ್ದೆ ಭರ್ತಿಗೆ ಕ್ರಮ: ‘ಔಷಧ ನಿಯಂತ್ರಣ ಇಲಾಖೆಯಲ್ಲಿ ಒಟ್ಟು 112 ಔಷಧ ಪರಿವೀಕ್ಷಕರ ಹುದ್ದೆಗಳಲ್ಲಿ 8 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಕೆಪಿಎಸ್‍ಸಿಗೆ ಒಟ್ಟು 83 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ನೇಮಕಾತಿ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‍ನಲ್ಲಿ ದಾಖಲಾಗಿರುತ್ತದೆ. ಈ ಪ್ರಕರಣದ ಇತ್ಯರ್ಥವಾದ ನಂತರ ಭರ್ತಿ ಮಾಡಲಾಗುವುದು’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News