ಪಂಚಮಸಾಲಿ ಮೀಸಲಾತಿ | ಪೊಲೀಸರೇ ವಿನಾಕಾರಣ ಲಾಠಿ ಪ್ರಹಾರ ನಡೆಸಿದ್ದಾರೆ : ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪ
ಬೆಳೆಗಾವಿ : ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಚಳುವಳಿಗಾರ ಮೇಲೆ ಪೊಲೀಸ್ ಅಧಿಕಾರಿಗಳೇ ವಿನಾಕಾರಣ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ದೂರಿದ್ದಾರೆ
ಬುಧವಾರ ಇಲ್ಲಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ಮೇಲೆ ಕಲ್ಲು ಎಸೆದಿದ್ದು ಹೋರಾಟಗಾರರಲ್ಲ, ಬದಲಿಗೆ ಮಫ್ತಿಯಲಿದ್ದ ಪೊಲೀಸರು. ಪೊಲೀಸರೇ ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿ ಸಮಾಜದ ರೈತರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಸುಮಾರು 6 ಲಕ್ಷ ಸಮಾಜದವರು ಹೋರಾಟ ಮಾಡಿದಾಗ ನಮಗೆ ತಿಳಿ ಹೇಳಿದರು. ಆದರೆ ಇಂದಿನ ಎಡಿಜಿಪಿ ಆರ್.ಹಿತೇಂದ್ರ ನಮ್ಮ ಸಮಾಜದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಾಳೆಯಿಂದ ಹಳ್ಳಿ-ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ. ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ತೀವ್ರ ಸ್ವರೂಪ ಹೋರಾಟ ಮಾಡಲಾಗುವುದು ಎಂದು ಶ್ರೀಗಳು ಎಚ್ಚರಿಕೆ ನೀಡಿದರು.
ಇಪ್ಪತ್ತು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ನ್ಯಾಯಯುತ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಹೀಗಾಗಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟಕ್ಕೆ ಕರೆ ಕೊಟ್ಟಿದ್ದೇವು. ಅದರಂತೆ ಲಕ್ಷಾಂತರ ಸಂಖ್ಯೆಯಲ್ಲಿ ಕೊಂಡುಸಕೊಪ್ಪದ ಬಳ್ಳಿ ಪ್ರತಿಭಟನಾ ಸಮಾವೇಶ ನಡೆಸಿದಾಗ ಮೂವರು ಸಚಿವರ ಆಗಮಿಸಿ, ಸೂಕ್ತ ಭರವಸೆ ನೀಡಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಆದರೆ ನಿಮ್ಮ ಅಭಿಪ್ರಾಯ ಆಲಿಸಲು ಬಂದಿದ್ದೇವೆ ಎಂದರು.
ಇದಕ್ಕೆ ನಮ್ಮ ಸಮಾಜದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾಡಳಿತ ಟ್ರ್ಯಾಕ್ಟರ್ ಹೋರಾಟ ನಿಷೇಧ ಮಾಡಿತ್ತು. ನಾವು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿಯೇ ನಾವು ಹೋರಾಟ ಮಾಡಿದ್ದು, ಪೋಲಿಸರು ಬಲ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.