ಬೆಳಗಾವಿ: ಕುರಿಗಾಹಿಯ ಅಮೋಘ ಸಾಧನೆ; ಯುಪಿಎಸ್‌ಸಿಯಲ್ಲಿ 551 ನೇ ರ್‍ಯಾಂಕ್

ಬೆಳಗಾವಿ: ಕುರಿಗಾಹಿ ಕುಟುಂಬದ ಯುವಕನೊಬ್ಬ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ನೇ ರ್‍ಯಾಂಕ್ ಪಡೆದ ಬಗ್ಗೆ ಸಂಭ್ರಮಾರಣೆ ಮಾಡಿದ ಘಟನೆ ಬೆಳಗಾವಿ ತಾಲೂಕಿನಲ್ಲಿ ಬುಧವಾರ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಗಲ್ ಗ್ರಾಮದ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ರ್‍ಯಾಂಕ್ ವಿಜೇತ ಯುವಕ. ಬೀರಪ್ಪ ಕುರಿ ಕಾಯುತ್ತಾ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು.
ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ತೃತೀಯ ಪುತ್ರ ಬೀರಪ್ಪ ಸಿದ್ದಪ್ಪ ಡೋಣಿ ಕುರಿ ಕಾಯುತ್ತಿರುವಾಗಲೇ ಯುಪಿಎಸ್ಸಿ ಫಲಿತಾಂಶ ಬಂದಿದ್ದು, ತಾನು ಪಾಸಾದ ಸುದ್ದಿ ತಿಳಿದು ಕುಣಿದು ಕುಪ್ಪಳಿಸಿದ್ದಾರೆ.
ಬೀರಪ್ಪ ಅವರು ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿದ್ದು, ಗದ್ದೆಯೊಂದರಲ್ಲಿ ಕುರಿ ಮೇಯಿಸುತ್ತಿರುವಾಗ ಫಲಿತಾಂಶ ಬಂದಿದೆ. ಫಲಿತಾಂಶ ಬಂದ ತಕ್ಷಣ ಕುಟುಂಬಸ್ಥರು ಬೀರಪ್ಪ ಅವರಿಗೆ ಆರತಿ ಎತ್ತಿ ಹಾರ ಹಾಕಿ ಕೈಗೆ ಕುರಿ ಮರಿ ಕೊಟ್ಟು ಸ್ಮಾನಿಸಿದರು.
ಬೀರಪ್ಪನ ಇಡೀ ಕುಟುಂಬದ ವೃತ್ತಿಯೇ ಕುರಿಗಾಹಿತನ, ತಲೆತಲಾಂತರದಿಂದ ಅವರ ಕುಟುಂಬ ಕುರಿಕಾಯುವಿಕೆಯನ್ನೇ ಮಾಡಿಕೊಂಡು ಬಂದಿದೆ. ಆದರೆ ಈ ಯುವಕನಿಗೆ ಜೀವನದಲ್ಲಿ ಇನ್ನೇನಾದರೂ ಮಾಡಬೇಕೆಂಬ ಆಸೆ ಇತ್ತು. ತನಗೆ ಒಲಿದು ಬಂದ ಪೋಸ್ಟ್ ಆಫೀಸ್ ನೌಕರಿಯನ್ನು ಬಿಟ್ಟು ಓದಲು ಶುರು ಮಾಡಿದ.
ಬೀರಪ್ಪ ಅವರ ಸಾಧನೆಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ ಕುರಿ ಹಿಂಡಿನಲ್ಲಿಯೇ ಇರುವ ಬೀರಪ್ಪ ಡೋಣಿ ಮುಂದೆ ಐಪಿಎಸ್ ಆಫಿಸರ್ ಆಗಿ ಕೆಲಸ ಮಾಡುವ ಆಸೆ ಹೊಂದಿದ್ದಾರೆ. ಸಿದ್ದಪ್ಪ ಅವರ ಮೊದಲ ಮಗ ಅಂದರೆ ಬೀರಪ್ಪನ ಅಣ್ಣ ಸೈನ್ಯಕ್ಕೆ ಸೇರಿ ತಂದೆಯ ಆಸೆ ಈಡೇರಿಸಿದ್ದಾನೆ. ಸದ್ಯ ಯುಪಿಎಸ್ಸಿಯಲ್ಲಿ ಮೂರನೇ ಪ್ರಯತ್ನಕ್ಕೆ ತೇರ್ಗಡೆ ಹೊಂದಿರುವ ಬೀರಪ್ಪ ಮೊದಲ ಪ್ರಯತ್ನದಲ್ಲಿ ಮೂವತ್ತು ಹಾಗೂ ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕದಲ್ಲಿ ಹಿಂದೆ ಬಿದ್ದಿದ್ದರು.