ಬೆಳಗಾವಿ ಅಧಿವೇಶನ | 5,317 ಕೋಟಿ ರೂ.ಪೂರಕ ಅಂದಾಜುಗಳ ಮಂಡನೆ
ಬೆಳಗಾವಿ : ಮೂರು ಕ್ಷೇತ್ರಗಳ ಉಪಚುನಾವಣೆ ವೆಚ್ಚಕ್ಕೆ 2.11ಕೋಟಿ ರೂ., ಮಂಡ್ಯದಲ್ಲಿ ಇದೇ ತಿಂಗಳು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 5ಕೋಟಿ ರೂ. ಹಾಗೂ ನಾಯಕರ ಓಡಾಟಕ್ಕೆ ಮೀಸಲಾದ ಹೆಲಿಕಾಪ್ಟರ್ ನಿರ್ವಹಣೆ ವೆಚ್ಚಕ್ಕಾಗಿ 4.5ಕೋಟಿ ರೂ.ಗಳು ಹೆಚ್ಚುವರಿ ಸೇರಿದಂತೆ ಒಟ್ಟು 5,317.83 ಕೋಟಿ ರೂ.ಮೊತ್ತದ 2024-25ನೆ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪೂರಕ ಅಂದಾಜುಗಳನ್ನು ಮಂಡಿಸಿದರು. ಬೆಳಗಾವಿಯಲ್ಲಿ ಡಿ.26ರಿಂದ ನಡೆಯಲಿರುವ ಕಾಂಗ್ರೆಸ್ ಅಧಿವೇಶದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ 8 ಕೋಟಿ ರೂ,ಗಳನ್ನು ಒದಗಿಸಲಾಗಿದೆ. ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ರಸ್ತೆಗಳ ನಿರ್ಮಾಣಕ್ಕೆ 500 ಕೋಟಿ ರೂ., ಆನೆಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ 150 ಕೋಟಿ ರೂ.ಗಳನ್ನು ನೀಡಲಾಗಿದೆ.
ರಾಜ್ಯದ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿ, ಹೆಚ್ಚುವರಿ ಆದಾಯ ತರುವ ಸಲುವಾಗಿ ಸಲಹೆ ನೀಡಲು ‘ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್’ ಎಂಬ ವಿದೇಶಿ ಸಂಸ್ಥೆ ನೇಮಿಸಿಕೊಂಡಿದೆ. ಆ ಸಂಸ್ಥೆಗೆ 5.6ಕೋಟಿ ರೂ.ಪಾವತಿಗೆ ಪೂರಕ ಅಂದಾಜಿನಲ್ಲಿ ಹಣ ನೀಡಿದ್ದು, ಈ ಸಂಸ್ಥೆಗೆ ಆರು ತಿಂಗಳಿಗೆ 9.5 ಕೋಟಿ ರೂ.ಸಂಭಾವನೆಯನ್ನು ನಿಗದಿಪಡಿಸಿದೆ. ಸಿಎಂ ವಿಶೇಷ ಅನುದಾನದಡಿ ಕಾಮಗಾರಿಗಳ ಬಾಕಿ ಬಿಲ್‍ಗಳ ಪಾವತಿಗೆ 300ಕೋಟಿ ರೂಗಳನ್ನು ಒದಗಿಸಲಾಗಿದೆ.
ಅತಿವೃಷ್ಟಿಯಿಂದ ಹಾನಿಯಾದ ರಸ್ತೆ, ಸೇತುವೆಗಳ ದುರಸ್ತಿಗೆ 200 ಕೋಟಿ ರೂ., ಎಸ್‍ಸಿಎಸ್ಪಿ-ಟಿಎಸ್ಪಿ ಯೋಜನೆಗಳಿಗೆ 193ಕೋಟಿ ರೂ., ಅಲ್ಲದೆ, ಮಂಡ್ಯ ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿ 5 ಕೋಟಿ ರೂ.ಒದಗಿಸಿದ್ದು, ಈ ಮೊದಲು ಸಾಹಿತ್ಯ ಸಮ್ಮೇಳನಕ್ಕೆ 15 ಕೋಟಿ ರೂ. ನೀಡಿದ್ದು, ಒಟ್ಟು 20 ಕೋಟಿ ರೂ.ಗಳನ್ನು ಸಾಹಿತ್ಯ ಸಮ್ಮೇಳನಕ್ಕಾಗಿ ಸರಕಾರ ಒದಗಿಸಿದೆ. ಅಲ್ಲದೆ, ಬೆಳಗಾವಿಯ ವಿಧಾನ ಮಂಡಲ ಅಧಿವೇಶನಕ್ಕೆ ಹೆಚ್ಚುವರಿಯಾಗಿ 7.4ಕೋಟಿ ರೂ.ಗಳನ್ನು ನೀಡಲಾಗಿದೆ.
ಹಾಲಿ ಶಾಸಕರ ವೈದ್ಯಕೀಯ ವೆಚ್ಚದ ಮರುಪಾವತಿಗೆ 1.25ಕೋಟಿ ರೂ., ಮಾಜಿ ಶಾಸಕರ ವೈದ್ಯಕೀಯ ವೆಚ್ಚದ ಮರುಪಾವತಿಗೆ 3 ಕೋಟಿ ರೂ., ನಾಗಮಂಗಲ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮುಗಲಭೆಯಿಂದ ಹಾನಿಯಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವಾಗಿ 2.66 ಕೋಟಿ ರೂ. ನೀಡಲಾಗಿದೆ. ಈ ಮೊದಲು ಉಪಚುನಾವಣೆಗಾಗಿ 3.10 ಕೋಟಿ ರೂ.ಒದಗಿಸಿದ್ದ ಸರಕಾರ ಇದೀಗ ಪೂರಕ ಅಂದಾಜಿನಲ್ಲಿ 2.11 ಕೋಟಿ ರೂ.ನೀಡಿದೆ.