ಬೆಳಗಾವಿ ಅಧಿವೇಶನ | ಸದನದಲ್ಲಿ ʼಉತ್ತರ ಕರ್ನಾಟಕʼದ ಭಾಗದ ಅಭಿವೃದ್ದಿಯ ಕುರಿತು ಚರ್ಚೆ
ಬೆಳಗಾವಿ : ವಿಧಾನ ಮಂಡಲದ ಉಭಯ ಸದನಗಳಲ್ಲಿ ‘ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ವಿಶೇಷ ಚರ್ಚೆ’ ಆರಂಭಿಸಿದ್ದು, ಆ ಭಾಗದ ಸಮಸ್ಯೆಗಳ ಮೇಲೆ ಹೊಸ ಸದಸ್ಯರು ಬೆಳಕು ಚೆಲ್ಲಿದರಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಮಾತನಾಡಿ, ‘ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ ಮಾಡುವುದನ್ನು ಜನ ಎಂದಿಗೂ ಸಹಿಸುವುದಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಕೂಗು ಏಳಲಿದೆ’ ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆ ಎಂದರೆ ಅದು ಕೃಷ್ಣಾ ಮೇಲ್ದಂಡೆ ಯೋಜನೆ. ಆಲಮಟ್ಟಿ ಎತ್ತರದ ಕುರಿತು ಪದೇ ಪದೇ ಚರ್ಚೆಗಳಾಗುತ್ತಿವೆ. 1964ರಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ 40 ವರ್ಷಗಳ ಬಳಿಕ ಪೂರ್ಣಗೊಂಡಿತ್ತು. ಆಲಮಟ್ಟಿ ಎತ್ತರ ಇನ್ನೂ ಬಾಕಿ ಇದೆ. ಭೂ ಸ್ವಾಧೀನಕ್ಕೆ ಅಂತಿಮ ಹಂತದ ಸರ್ವೆ ಮಾಡಿ 2,700 ಎಕರೆ ಪರಿಹಾರ ನೀಡಲಾಗಿದೆ. ಉಳಿದ ಭೂಮಿಗೆ ಹಣ ನೀಡಿಲ್ಲ. ಹೀಗಾಗಿ ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೀರಿನ ಸಂಗ್ರಹಣೆಯಿಂದ ಭೂಮಿ ಜೌಗು ಪ್ರದೇಶವಾಗಿದ್ದು, ಕೃಷಿಗೆ ಯೋಗ್ಯವಿಲ್ಲದಂತಾಗಿದೆ ಎಂದು ಅವರು ಗಮನ ಸೆಳೆದರು.
ಉತ್ತರ ಕರ್ನಾಟಕ ಭಾಗವನ್ನು ಎಲ್ಲ ಸರಕಾರಗಳು ಕಡೆಗಣಿಸಿವೆ. ಕಾವೇರಿ ನದಿ ಯೋಜನೆಗಳಿಗೆ ನೀಡುವಷ್ಟು ಆದ್ಯತೆ ಕೃಷ್ಣಾ ನದಿ ಯೋಜನೆಗಳಿಗೆ ನೀಡುತ್ತಿಲ್ಲ. ಕಾವೇರಿ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದ್ದರೆ ರೈತರ ಪ್ರತಿಕ್ರಿಯೆಯೇ ಬೇರೆ ರೀತಿ ಇರುತ್ತಿತ್ತು. ಆದರೆ ನಮ ಭಾಗದಲ್ಲಿ ಒಗ್ಗಟ್ಟಿಲ್ಲದ ಕಾರಣ ಈವರೆಗೂ ಹಣ ಸಿಕ್ಕಿಲ್ಲ ಎಂದು ಸಿದ್ದು ಸವದಿ ಹೇಳಿದರು.