‘ಚಿವೇನಿಂಗ್ ಕರ್ನಾಟಕ : ಸ್ನಾತಕೋತ್ತರ ವಿದ್ಯಾರ್ಥಿವೇತನ ಒಡಂಬಡಿಕೆಗೆ ಸಹಿ’

Update: 2024-12-16 18:10 GMT

ಬೆಳಗಾವಿ(ಸುವರ್ಣ ವಿಧಾನಸೌಧ) : ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತದ ಬ್ರಿಟಿಷ್‌ ಹೈ ಕಮಿಷನ್ ಸಹಯೋಗದಲ್ಲಿ ಮಹಿಳಾ ಪದವೀಧರೆಯರಿಗೆ ಅಂತರ್‌ರಾಷ್ಟೀಯ ಸ್ನಾತಕೋತ್ತರ ವಿದ್ಯಾರ್ಥಿ ವೇತನ ‘ಚಿವೇನಿಂಗ್ ಕರ್ನಾಟಕ’ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಡಂಬಡಿಕೆ ಸಹಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.

ಸೋಮವಾರ ಸುವರ್ಣ ವಿಧಾನಸೌಧದ ಮೂರನೇ ಮಹಡಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಜಾಗತಿಕ ಸಹಯೋಗದೊಂದಿಗೆ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ನಾಯಕತ್ವದ ಗುಣವನ್ನು ಉತ್ತೇಜಿಸುವ ಮೂಲಕ ವಿದ್ಯಾರ್ಥಿನಿಯರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕುವ ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.

ಜಾಗತಿಕವಾಗಿ ನಾವು ಬಲಿಷ್ಠರಾಗಲು ಶಿಕ್ಷಣವು ಸಹ ನಮಗೆ ಪ್ರಮುಖ ಅಸ್ತ್ರವಾಗಿದೆ. ಉತ್ತಮವಾದ ವ್ಯಕ್ತಿತ್ವ ಹೊಂದಲು ಮತ್ತು ನಾಯಕತ್ವ ಗುಣದೊಂದಿಗೆ ವಿದ್ಯಾರ್ಥಿಗಳು ದೃಢವಾದ ಹೆಜ್ಜೆಯನ್ನಿಡಲು ಪರಿಣಾಮಕಾರಿಯಾದ ಶಿಕ್ಷಣದ ಅವಶ್ಯಕತೆಯಿದ್ದು, ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವ ಇಂತಹ ಒಡಂಬಡಿಕೆ ಕಾರ್ಯಕ್ರಮದ ಅನುಷ್ಟಾನಕ್ಕೆ ರಾಜ್ಯ ಸರಕಾರವು ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್‌ ಡೆಪ್ಯೂಟಿ ಹೈ ಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಮೂರು ವರ್ಷಗಳ ಈ ಕಾರ್ಯಕ್ರಮದ ಒಟ್ಟು ವೆಚ್ಚ 6 ಕೋಟಿ ರೂ.ಗಳಾಗಿದ್ದು, ಕರ್ನಾಟಕ ಸರಕಾರವು 3 ಕೋಟಿ ರೂ. ಮತ್ತು ಉಳಿದ ಮೊತ್ತವನ್ನು ಯುನೈಟೆಡ್ ಕಿಂಗ್ಡಮ್‍ನ ಚಿವೇನಿಂಗ್ ಸೆಕ್ರೇಟರಿಯೇಟ್‍ನಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.

ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಖ್ ಮಾತನಾಡಿ, ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ವಿದ್ಯಾರ್ಥಿನಿಯರಿಗೆ ಸಾಕಷ್ಟು ಅನುಕೂಲಕರವಾಗಿದೆ. ವಿದ್ಯಾರ್ಥಿನಿಯರು ತಮ್ಮ ಇಚ್ಛೆಯ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಪಡೆಯಲು ಮಾನ್ಯತೆ ಪಡೆದ ಯುನೈಟೆಡ್ ಕಿಂಗ್ಡಮ್‍ನ ಯಾವುದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಸುವರ್ಣವಕಾಶವನ್ನು ಈ ಯೋಜನೆ ಕಲ್ಪಿಸುತ್ತದೆ ಎಂದು ತಿಳಿಸಿದರು.

ವಿಶೇಷವಾಗಿ ಸರಕಾರಿ ಕಾಲೇಜುಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ಈ ಕಾರ್ಯಕ್ರಮವು ಸದಾವಕಾಶ ಕಲ್ಪಿಸುತ್ತದೆ. ಶಿಕ್ಷಣ ಪಡೆಯುವುದು ಬರೀ ಉದ್ಯೋಗಕ್ಕಾಗಿ ಅಲ್ಲ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ದಾರಿದೀಪವಾಗುತ್ತದೆ. ಶಿಕ್ಷಣದಲ್ಲಿ ಬಂಡವಾಳ ಹೂಡುವುದು ಬಹಳ ಮಹತ್ವದ ಕಾರ್ಯವಾಗಿದ್ದು, ಈ ಕಾರ್ಯಕ್ರಮವು ಮಹತ್ವದ ಗುರಿಯೊಂದಿಗೆ ಸಾಗುವ ವಿದ್ಯಾರ್ಥಿಗಳ ಏಳ್ಗೆಗೆ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್. ಪ್ರಾಸ್ತಾವಿಕ ಮಾತನಾಡಿ, ಯುನೈಟೆಡ್ ಕಿಂಗಡಮ್‍ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಕರ್ನಾಟಕದ ಸರಕಾರಿ ಕಾಲೇಜುಗಳ ಪದವೀಧರೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಚಿವೆನಿಂಗ್ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಹೊಂದಿದೆ ಎಂದು ತಿಳಿಸಿದರು.

ಈ ವಿದ್ಯಾರ್ಥಿ ವೇತನವು 2024-2027 ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 5 ಮಹಿಳಾ ಪದವೀಧರರಿಗೆ ಬೋಧನಾ ಶುಲ್ಕ, ಪ್ರಯಾಣ ಮತ್ತು ವಸತಿ ವೆಚ್ಚವನ್ನು ಸಂಪೂರ್ಣವಾಗಿ ಒಳಗೊಂಡಿರುತ್ತದೆ. 3 ವರ್ಷದಲ್ಲಿ ಒಟ್ಟು 15 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬ್ರಿಟಿಷ್‌ ಹೈ ಕೌನ್ಸಿಲ್‍ನ ಸುಪ್ರಿಯಾ ಚಾವ್ಲಾ, ಮಂಜುನಾಥ ಕೆ.ಎನ್., ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಶೋಭಾ ಜಿ., ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪಿ.ಎಂ.ತ್ಯಾಗರಾಜ್, ಕುಲ ಸಚಿವ ಸಂತೋಷ್, ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News