ಅನುಭವ ಮಂಟಪ’ದ ತೈಲಚಿತ್ರದ ಅನಾವರಣ ಮಾಡಿದ್ದು ನನ್ನ ಸೌಭಾಗ್ಯ : ಸಿಎಂ ಸಿದ್ದರಾಮಯ್ಯ
ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಅನುಭವ ಮಂಟಪದ ತೈಲಚಿತ್ರ ಅಳವಡಿಕೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಮಾತನಾಡಿದ ಅವರು, ಹನ್ನೇರಡನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು ಎಂದು ಸ್ಮರಿಸಿದರು.
ಮೇಲು-ಕೀಳು ಇರುವುದು, ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ‘ದಯೆ ಇಲ್ಲದ ಧರ್ಮ ಯಾವುದಯ್ಯ, ದಯೆಯೇ ಧರ್ಮದ ಮೂಲವಯ್ಯ’ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಬಸವಾದಿ ಶರಣರು ಧರ್ಮವನ್ನು ಬೋಧಿಸಿದರು ಎಂದು ಮುಖ್ಯಮಂತ್ರಿ ತಿಳಿಸಿದರು.
ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು. ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು. ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು ಎಂದು ಅವರು ಹೇಳಿದರು.
ಜಾತಿವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ. ‘ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ, ಬೆಳೆಯುತಾ, ಬೆಳೆಯುತಾ ಅಲ್ಪ ಮಾನವರಾಗುತ್ತೇವೆ’ ಎಂದು ಕುವೆಂಪು ಹೇಳಿದರೆ, ‘ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ’ ಎಂದು ಕನಕದಾಸರು ಹೇಳಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.
ಇವತ್ತಿನ ವಿಧಾನಸಭೆ, ಲೋಕಸಭೆ, ಅವತ್ತಿನ ಅನುಭವ ಮಂಟಪ. ಅತ್ಯಂತ ಕೆಳ ಸಮುದಾಯದ ಅಲ್ಲಮ ಪ್ರಭು ಅದರ ಅಧ್ಯಕ್ಷರಾಗಿದ್ದರು. ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳು, ಶರಣ ಶರಣೆಯರೂ ಸದಸ್ಯರಾಗಿದ್ದರು ಎಂದು ಅವರು ಹೇಳಿದರು.
ಬುದ್ದನ ಕಾಲದಲ್ಲೂ ಈ ರೀತಿಯ ಸರ್ವ ಜಾತಿ, ಸರ್ವ ಧರ್ಮದ ಪ್ರತಿನಿಧಿಗಳನ್ನು ಒಳಗೊಂಡ ಮಂಟಪಗಳಿದ್ದವು ಎಂದು ಚರಿತ್ರೆಯಲ್ಲಿ ಓದಿದ್ದೇವೆ. ‘ಇತಿಹಾಸವನ್ನು ತಿಳಿಯದವರು ಇತಿಹಾಸ ಸೃಷ್ಟಿಸಲಾರರು’ ಎಂದು ಅಂಬೇಡ್ಕರ್ ಹೇಳಿದ್ದ ಮಾತನ್ನು ನಾವು ಸ್ಮರಿಸಿಕೊಳ್ಳಬೇಕು. ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ನಮ್ಮ ಸಮಾಜ ಚಲನೆ ರಹಿತವಾಗಿದೆ ಎಂದು ಲೋಹಿಯಾ ಹೇಳಿದ್ದರು. ಆರ್ಥಿಕ ಮತ್ತು ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಸಮಾಜದ ಚಲನೆ ಸಾಧ್ಯ ಎಂದು ಅವರು ತಿಳಿಸಿದರು.
850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಜಾತಿ ಮೀರಿದ ಸಾಮಾಜಿಕ ವ್ಯವಸ್ಥೆ ರೂಪಿಸಲು ಶ್ರಮಿಸಿದ್ದರು. ಅವರ ಶ್ರಮಕ್ಕೆ ಪ್ರತೀಕವಾದ ಅನುಭವ ಮಂಟಪದ ತೈಲಚಿತ್ರವನ್ನು ನಿಮ್ಮ ಅವಧಿಯಲ್ಲಿ ಅನಾವರಣಗೊಳಿಸಿದ್ದು ಒಳ್ಳೆಯದಾಯಿತು. ಜೊತೆಗೆ, ಸಭಾಧ್ಯಕ್ಷರ ಪೀಠವನ್ನು ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪರಿಕಲ್ಪನೆಯಂತೆ ಸಿದ್ಧಗೊಳಿಸಿ, ಅಳವಡಿಸಿದ್ದು ಶ್ಲಾಘನೀಯ ಎಂದು ಸ್ಪೀಕರ್ ಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಜಾತಿ ತಾರತಮ್ಯ, ಲಿಂಗ ತಾರತಮ್ಯ ತೊಡೆದು ಹಾಕುವ ಪ್ರಯತ್ನ 12ನೆ ಶತಮಾನದಲ್ಲಿ ಆಗಿನ ಅನುಭವ ಮಂಟಪದಲ್ಲಿ ಆಗಿತ್ತು. ಇದು ನಡೆದು 10 ಶತಮಾನಗಳೇ ಕಳೆದಿವೆ, ಆದರೆ ಕಾಲ ಕಳೆದಿದೆಯೇ ಹೊರತು, ಜಾತಿ ವ್ಯವಸ್ಥೆ ಹಾಗೂ ಜಾತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ’ ಎಂದು ಹೇಳಿದರು.
ರಾಜಕೀಯ ಹಾಗೂ ಬೇರೆ ಬೇರೆ ಸೌಲಭ್ಯಗಳನ್ನು ಪಡೆಯಲೇಬೇಕು ಎಂಬ ದೃಷ್ಟಿಯಿಂದ ಹಾಗೂ ದುರಾಸೆಯ ಪ್ರತಿಫಲವೇ ಈಗಿನ ಜಾತಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಕಾರಣವಾಗಿದ್ದು, ಜಾತಿ ವ್ಯವಸ್ಥೆಯನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಧರ್ಮಾಂಧತೆ, ಜಾತೀಯತೆ ನಮ್ಮೆಲ್ಲರ ಅಭಿವೃದ್ಧಿಗೆ ಮಾರಕವಾಗಿದೆ. 12ನೇ ಶತಮಾನದಲ್ಲಿ ಧರ್ಮವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿದ್ದರು. ತನ್ನ ವಚನ ಸಾಹಿತ್ಯ ಚಳವಳಿ ಮೂಲಕ ನಾವೆಲ್ಲ ಒಂದೇ ಎಂದು ಸಾರಿದರು. ಪ್ರಪಂಚಕ್ಕೆ ಮಾದರಿಯಾದರು. ಬಸವಣ್ಣನವರ ಆಲೋಚನೆಗಳನ್ನು ಕೇವಲ ಭಾಷಣದ ವಸ್ತುವನ್ನಾಗಿಸದೆ, ಪ್ರಜಾಪ್ರಭುತ್ವನ್ನು ಬಲಪಡಿಸಲು ಯತ್ನಿಸೋಣ’ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ‘ಅನುಭವ ಮಂಟಪ ವಿಶ್ವದ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು ಅನುಭವ ಮಂಟಪ. ಹೆಣ್ಣಿಗೆ, ಮಣ್ಣಿಗೆ, ಅಧಿಕಾರಕ್ಕಾಗಿ ಕ್ರಾಂತಿಗಳಾಗಿದ್ದನ್ನು ನಾವು ಕೇಳಿದ್ದೇವೆ, ಆದರೆ, ಸಮಾಜದ ಏಳಿಗೆಗೆ ಕ್ರಾಂತಿಯಾಗಿದ್ದು 12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ಮಾತ್ರ. 2025ರಲ್ಲಿ 670 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಕಾರ್ಯ ಮಾಡುತ್ತೇವೆ’ ಎಂದರು.
ಅನುಭವ ಮಂಟಪದ ತೈಲಚಿತ್ರ ಅನಾವರಣ ಕುರಿತಂತೆ ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಸದಸ್ಯರಾದ ಅರವಿಂದ ಬೆಲ್ಲದ್, ಬಸವರಾಜ ರಾಯರಡ್ಡಿ, ಬಿ.ವೈ.ವಿಜಯೇಂದ್ರ, ಶಶಿಕಲಾ ಜೊಲ್ಲೆ, ಕೆ.ಎಂ.ಶಿವಲಿಂಗೇಗೌಡ, ಅಪ್ಪಾಜಿ ನಾಡಗೌಡ, ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು, ಅನುಭವ ಮಂಟಪದ ತೈಲವರ್ಣ ಚಿತ್ರ ಅನಾವರಣಗೊಳಿಸಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
……………………