ಕೃಷ್ಣ ಅವರು ನನಗೆ ಫೋನ್ ಮಾಡಿ ಬಿಜೆಪಿಗೆ ಸೇರ್ಪಡೆ ಆಗಬಹುದಾ ಎಂದು ಕೇಳಿದ್ದರು : ಆರ್. ಅಶೋಕ್
ಬೆಳಗಾವಿ (ಸುವರ್ಣ ವಿಧಾನಸೌಧ) : ಉದ್ಯಾನನಗರಿ, ಐಟಿ-ಬಿಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ನಗರಕ್ಕೆ ನಿಜಕ್ಕೂ ‘ಬ್ರಾಂಡ್ ಬೆಂಗಳೂರು’ ಘನತೆಯನ್ನು ತಂದುಕೊಟ್ಟವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಬಣ್ಣಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಇಡೀ ದೇಶವೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ರೂಪಿಸಿದ್ದು, ದೇಶಕ್ಕೆ ಆದಾಯ ನೀಡುವ ನಗರವನ್ನಾಗಿ ಮಾಡಿದ್ದಾರೆ. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ನಮ್ಮ ಮೆಟ್ರೋ ತಂದಿದ್ದರು ಕೃಷ್ಣ ಅವರು. ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಮಾದರಿಯಲ್ಲೇ ವಿಕಾಸಸೌಧ ನಿರ್ಮಿಸುವ ಮೂಲಕ ಕೃಷ್ಣ ಅವರು ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಬಿಜೆಪಿ ಸೇರ್ಪಡೆ ಆಗಬಹುದೇ? ಎಂದು ಕೇಳಿದ್ದರು :
‘ಕೃಷ್ಣ ಅವರು ನನಗೆ ಫೋನ್ ಮಾಡಿ ಬಿಜೆಪಿಗೆ ಸೇರ್ಪಡೆ ಆಗಬಹುದಾ? ಎಂದು ಕೇಳಿದ್ದರು. ಬಳಿಕ ನಾನೂ ಅವರ ಜೊತೆಗೆ ದಿಲ್ಲಿಗೆ ಹೋಗಿದ್ದೆ. ಇದಾದ ಬಳಿಕ ಯಾರಾದರೂ ಸಿಕ್ಕರೆ, ಇವನೇ ಪುಣ್ಯಾತ್ಮ ನನ್ನನ್ನು ಬಿಜೆಪಿಗೆ ಕರೆದುಕೊಂಡು ಹೋಗಿದ್ದು ಎಂದು ಹೇಳುತ್ತಿದ್ದರು. ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರೂ ಎಲ್ಲ ಪಕ್ಷದವರ ಜೊತೆ ಪ್ರೀತಿಯಿಂದ ಇದ್ದರು. ಕನ್ನಡಿಗರು ಹೆಮ್ಮೆ ಪಡುವಂತಹ ಮುಖ್ಯಮಂತ್ರಿ ಆಗಿದ್ದರು’
ಕಳಂಕ ರಹಿತ ರಾಜಕಾರಣಿಯಾಗಿರುವ ಕೃಷ್ಣ ಅವರು, ಎಂದೂ ಯಾರೊಬ್ಬರ ವಿರುದ್ಧವೂ ದ್ವೇಷದ ಮಾತುಗಳನ್ನಾಡಲಿಲ್ಲ. ನಂಬರ್ ಒನ್ ಮುಖ್ಯಮಂತ್ರಿ ಎಂಬ ಬಿರುದಿಗೆ ಪಾತ್ರವಾಗಿದ್ದರು. ಅದೇ ರೀತಿಯಲ್ಲಿ ಸಿಂಗಾಪುರ ಕೃಷ್ಣ, ಟೆನಿಸ್ಸ್ ಕೃಷ್ಣ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ನನ್ನ ಸೌಭಾಗ್ಯವೇ ಇರಬೇಕು. ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ನಾನು ಅವರೊಂದಿಗೆ ದಿಲ್ಲಿಗೆ ತೆರಳಿದ್ದೆ ಎಂದು ಅಶೋಕ್ ನೆನಪು ಮಾಡಿಕೊಂಡರು.
ಗಾಂಧಿ ಆಶೀರ್ವಾದ ಪಡೆದ ವ್ಯಕ್ತಿ :
ಕೃಷ್ಣ ಅವರ ತಂದೆ ಮಲ್ಲಯ್ಯ ಅವರು ಸಮಾಜ ಸೇವೆಯಲ್ಲಿ ಎತ್ತಿದ ಕೈ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಮಲ್ಲಯ್ಯ ಅವರ ಮನೆಗೆ ಒಮ್ಮೆ ಬಂದಿದ್ದರು. ಹರಿಜನ ಸೇವಾ ಕಾರ್ಯನಿಮಿತ್ತ ದೇಣಿಗೆ ಸಂಗ್ರಹಿಸುತ್ತಿದ್ದರು. ಆ ಸಂದರ್ಭದಲ್ಲಿ ಮಲ್ಲಯ್ಯ ಅವರು ಗಾಂಧಿಗೆ ಎರಡೂ ರೂಪಾಯಿಗಳನ್ನು ನೀಡಿದರೆ, ಆ ಹಣ ನನಗೆ ಬೇಡ, ನಿಮ್ಮ ಪುತ್ರ ಎಸ್.ಎಂ.ಕೃಷ್ಣರ ಕಿವಿಯಲ್ಲಿರುವ ಓಲೆ ಕೊಡು ಎಂದು ಗಾಂಧಿ ಕೇಳಿದರು. ಮಲ್ಲಯ್ಯ ಮರು ಮಾತನಾಡದೆ ಕೃಷ್ಣರ ಕಿವಿಯಲ್ಲಿದ್ದ ಓಲೆ ಬಿಚ್ಚಿಕೊಟ್ಟು ಮಾದರಿಯಾಗಿದ್ದರು. ಆ ವೇಳೆಗೆ ಮಹಾತ್ಮ ಗಾಂಧಿ ಆಶೀರ್ವಾದ ಪಡೆದುಕೊಂಡಿದ್ದ ವ್ಯಕ್ತಿ ಕೃಷ್ಣ ಅವರು ಎಂದು ಅಶೋಕ್ ಸ್ಮರಿಸಿದರು.