ಬೆಳಗಾವಿ ಕುರಿತ ಆದಿತ್ಯ ಠಾಕ್ರೆ ಹೇಳಿಕೆ | ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದೇನು
ಬೆಳಗಾವಿ : ʼಬೆಳಗಾವಿ ನಮ್ಮದು, ಅದನ್ನು ಬಿಟ್ಟು ಕೊಡಲು ಸಾಧ್ಯವಿಲ್ಲʼ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆಗೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿಬೇಕು ಎಂದ ಆದಿತ್ಯ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ʼಬೆಳಗಾವಿ ಕರ್ನಾಟಕದ ಪ್ರಮುಖ ಭಾಗ. ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವನ್ನ ಕೇಂದ್ರಾಡಳಿತ ಮಾಡಲು ಸಾಧ್ಯವಿಲ್ಲ. ಆದಿತ್ಯ ಠಾಕ್ರೆಗೆ ಮಾಹಿತಿ ಕೊರತೆ ಇರಬೇಕು. ಅವರು ಗೊತ್ತಿಲ್ಲ ಅಂದರೆ ಓದಿ ತಿಳಿದು ಕೊಳ್ಳಲಿʼ ಎಂದರು.
ಆದಿತ್ಯ ಠಾಕ್ರೆ ಹೇಳಿದ್ದೇನು ? :
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ(ಎಂಇಎಸ್) ವಾರ್ಷಿಕ ಸಮಾವೇಶ ನಡೆಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆದಿತ್ಯ ಠಾಕ್ರೆ, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದರು.
ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಸಂಭ್ರಮಾಚರಣೆಯಲ್ಲಿದೆ. ಆದರೆ, ಬೆಳಗಾವಿಯ ಪರಿಸ್ಥಿತಿಗಳನ್ನು ನೋಡಿ, ನೆರೆಯ ಪ್ರದೇಶದಲ್ಲಿ ವಾಸಿಸುವ ಮರಾಠಿ ಮಾತನಾಡುವ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಹೇಳಿದ್ದರು.