ಪಂಚಮಸಾಲಿ ಮೀಸಲಾತಿ ಹೋರಾಟ | ಕೋರ್ಟ್ ಆದೇಶದ ಉಲ್ಲಂಘನೆ, ಪೋಲಿಸರ ಮೇಲೆ ಕಲ್ಲು ತೂರಾಟದ ಹಿನ್ನಲೆಯಲ್ಲಿ ಲಾಠಿ ಪ್ರಹಾರ : ಜಿಲ್ಲಾಡಳಿತದ ಸ್ಪಷ್ಟನೆ

Update: 2024-12-11 12:14 GMT

ಬೆಳಗಾವಿ : ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಕೋರ್ಟ್ ಆದೇಶ ಉಲ್ಲಂಘನೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆದು ಹಾಗೂ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿ, ಪೊಲೀಸ್ ವಾಹನಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಅನಿವಾರ್ಯವಾಗಿ ಕ್ರಮಕ್ಕೆ‌ ಮುಂದಾಗಬೇಕಾಯಿತು ಎಂದು ಜಿಲ್ಲಾಡಳಿತವು ಸ್ಪಷ್ಟನೆ ನೀಡಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಹಮ್ಮದ್ ರೋಶನ್, ಪಂಚಮಸಾಲಿ ‌ಮೀಸಲಾತಿ ಹೋರಾಟಗಾರು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಲ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಬಂತು ಎಂದರು.

ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಎರಡೂ ದಿನಗಳ ಹಿಂದೆ ಅರ್ಜಿ ಬಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾಡಳಿತದಿಂದ ಕೆಲವೊಂದು ಸೂಚನೆ ನೀಡಲಾಗಿತ್ತು. ಆದರೆ ಹೈರ್ಕೋಟ್ ಆದೇಶದಂತೆ ಕಾನೂನು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬಂದ್ ಮಾಡದಂತೆ ಸ್ಪಷ್ಟವಾಗಿ ತಿಳಿಸಿದರೂ ಹೋರಾಟಗಾರರು ಜಿಲ್ಲಾಡಳಿತಕ್ಕೆ ಸಹಕರಿಸಲಿಲ್ಲ ಎಂದು ಹೇಳಿದರು.

ಪಂಚಮಸಾಲಿ ಸಮಾಜದವರು ಬೆಳಗಾವಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಅವರು ಆಯ್ಕೆ ಮಾಡಿದ ಸ್ಥಳದಲ್ಲಿ‌ ಹೋರಾಟ ಮಾಡಬಹುದಿತ್ತು. ಆದರೆ, ಟ್ರ್ಯಾಕ್ಟರ್ ತರದೆ ಶಾಂತಿಯುತ ಹೋರಾಟ ನಡೆಸಬೇಕೆಂದು ಹೈಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ‌. ಕಾನೂನು ಸುವ್ಯವಸ್ಥೆ ಕಾಪಾಡುವುದು ‌ಜಿಲ್ಲಾಡಳಿತದ ಕರ್ತವ್ಯ ಎಂದರು.

ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಮಾತನಾಡಿ, ಸುವರ್ಣ ವಿಧಾನಸೌಧದ ಎದುರಿನ ಕೊಂಡುಸಕೊಪ್ಪದ ಬಳಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ನ್ಯಾಯಾಲಯದ ಆದೇಶದಂತೆ ನಾವು ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದರು.

ಆ ಬಳಿಕ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಕಾನೂನು‌ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿತ್ತು. ಕೊಂಡುಸಕೊಪ್ಪದಲ್ಲಿ ಪ್ರತಿಭಟನೆ ಮಾಡುದಾಗಿ ಪಂಚಮಸಾಲಿ ಗುರು ಪೀಠದ ಬಸವ ಜಯಮೃತ್ಯಜಯ ಸ್ವಾಮೀಜಿ ಹೇಳಿದ್ದರು. ಅದಕ್ಕೆ ಅನುಮತಿ ನೀಡಿದ್ದೇವು.

ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆಗೆ ಹತ್ತು ಜನಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಅವರು ಹತ್ತು ಸಾವಿರ ಜನ ವಿಧಾನಸೌಧಕ್ಕೆ ಹೊರಡಲು ಮುಂದಾಗಿದ್ದರು. ಆಗ ಏಕಾಏಕಿ‌ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ 14 ಪೊಲೀಸರಿಗೆ  ಗಂಭೀರವಾಗಿ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 70 ರಿಂದ 80 ಜನ ಹೋರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು.

ಘಟನೆಯಲ್ಲಿ ನಮ್ಮ ಪೊಲೀಸ್ ಇಲಾಖೆಯ ವಾಹನ ಸೇರಿದಂತೆ ನಾಲ್ಕು ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದರು.

ಎಸ್.ಪಿ.ಡಾ.ಭೀಮಾಶಂಕರ ಗುಳೇದ್ ಮಾತನಾಡಿ, ಲಿಂಗಾಯತ ಪಂಚಮಸಾಲಿ ಹೋರಾಟಗಾರರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಸೂಚಿಸಿದ ಆದೇಶವನ್ನು ತಾವೇ ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಬೇಕಾದಂತೆ ಎಲ್ಲ ಪ್ರತಿಭಟನೆಗೆ ಜಿಲ್ಲಾಡಳಿತ ಎಲ್ಲ ಸೌಕರ್ಯ ನೀಡಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ತಡೆದು ಪೊಲೀಸರ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News