ಪ್ರಜ್ವಲ್ ಪ್ರಕರಣ | ದೇವೇಗೌಡರ ಕುಟುಂಬ ರಾಜಕೀಯದಿಂದ ಹಿಂದೆ ಸರಿಯಬೇಕು : ವೀರಪ್ಪ ಮೊಯ್ಲಿ
ಬೆಳಗಾವಿ : ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‍ಡ್ರೈವ್ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ತಲೆ ತಗ್ಗಿಸಬೇಕು. ಅವರ ಕುಟುಂಬವೇ ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.
ಗುರುವಾರ ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಹಾಗೂ ಮೊಮ್ಮಗನಿಂದ ಸುಮಾರು ಎರಡು ಸಾರವಿಕ್ಕೂ ಹೆಚ್ಚು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಕೆಟ್ಟ ಹೆಸರು. ದೇಶದ ಎದುರು ಕರ್ನಾಟಕ ರಾಜ್ಯವು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ದೂರಿದರು.
ಲೈಂಗಿಕ ಹಗರಣದ ಮೂಲ ಸೂತ್ರದಾರ ಪ್ರಜ್ವಲ್ ಜತೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಮಧ್ಯೆ ಆತ ವಿದೇಶಕ್ಕೆ ತೆರಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ?. ಇಂತಹ ಕೃತ್ಯ ಎಸಗಿ, ಹಣ ದೋಚಿಕೊಂಡು ದೇಶದಿಂದ ಪರಾರಿಯಾಗುತ್ತಿದ್ದಾರೆ. ಕೇಂದ್ರದಲ್ಲಿ ಇಂತಹ ಸರಕಾರ ಇದ್ದರೆ ಏನು ಪ್ರಯೋಜನ ಎಂದು ವೀರಪ್ಪ ಮೊಯ್ಲಿ ಇದೇ ವೇಳೆ ಕಿಡಿಕಾರಿದರು.
ಪ್ರಧಾನಿ ಮೋದಿ ನಾರಿ ಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೇಳುತ್ತಾರೆ. ಯುಪಿಎ ಸಮಯದಲ್ಲಿ 3ಲಕ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳ ವರದಿ ಆಗಿತ್ತು. ಈಗ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22ಲಕ್ಷ ದಾಟಿದೆ. ಕೇಂದ್ರ ಸರಕಾರದ ಬಳಿಯೇ ರಾಷ್ಟ್ರೀಯ ಅಪರಾಧ ದಾಖಲೆಗಳಿಂದ ಮಾಹಿತಿ ಸಿಕ್ಕಿದೆ ಎಂದು ಅವರು ವಿವರ ನೀಡಿದರು.
‘ರಾಜ್ಯದಲ್ಲಿ ಪ್ರಧಾನಿ ಮೋದಿಗೆ ಮತ ಕೇಳಲು ನೈತಿಕತೆ ಇಲ್ಲ. ಮೋದಿ ಬಲಗಡೆ ಬಿಎಸ್‍ವೈ, ಎಡಗಡೆ ದೇವೇಗೌಡ ಇರುತ್ತಾರೆ. ಈ ಇಬ್ಬರೂ ಬಿಜೆಪಿಗೆ ಮೈನಸ್. ಮೈನಸ್ ಯಾವತ್ತೂ ಪ್ಲಸ್ ಆಗುವುದಿಲ್ಲ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಚೇತರಿಸಿಕೊಳ್ಳಲಿದ್ದು, ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದರು.