ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ನಿರ್ಣಯ, ಹೊಸ ದಾಖಲೆ : ಸ್ಪೀಕರ್ ಯು.ಟಿ.ಖಾದರ್
ಬೆಳಗಾವಿ : ಬೆಳಗಾವಿಯಲ್ಲಿ 1924ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅಧಿಕೃತ ನಿರ್ಣಯವನ್ನು ಡಿ.19ರಂದು ಸದನದಲ್ಲಿ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ವಿಧಾನಸಭೆಯಲ್ಲಿ ಡಿ.19ರಂದು ಕೊನೆಯ ದಿನದ ಅಧಿವೇಶನದ ಕಾರ್ಯಕಲಾಪ ಕುರಿತು ವಿವರಿಸಿದ ಅವರು, ಬೆಳಗಾವಿಯ ಸುವರ್ಣವಿಧಾನ ಸೌಧದಲ್ಲಿ ಪ್ರಥಮ ಬಾರಿಗೆ ತಡರಾತ್ರಿಯ ವರೆಗೆ ಅಧಿವೇಶನ ನಡೆಸಿ ಹೊಸ ದಾಖಲೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿಯ ಸುವರ್ಣ ವಿಧಾನ ಸೌಧದ ಮೊದಲನೇ ಮಹಡಿಯಲ್ಲಿ ಅನುಭವ ಮಂಟಪದ ತೈಲಚಿತ್ರವನ್ನು ಅನಾವರಣ ಮಾಡಲಾಗಿದೆ. ಸುವರ್ಣ ವಿಧಾನ ಸೌಧದ ವಿಧಾನಸಭೆಯ ಸಭಾಂಗಣದಲ್ಲಿರುವ ಸಭಾಧ್ಯಕ್ಷರ ಪೀಠವನ್ನು ಹೊಸದಾಗಿ ರೋಸ್‌ವುಡ್‌ನಿಂದ ನಿರ್ಮಿಸಿ ಅಳವಡಿಸಲಾಗಿದೆ.
ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಭಾರತ ದೇಶದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಹಾಗೂ ದೇಶದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್, ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರು, ಸ್ವಾತಂತ್ರ‍್ಯ ಹೋರಟಗಾರರು ಹಾಗೂ ದೇಶದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಅಜಾದ್ ಮತ್ತು ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರುಗಳ ಕಲಾಕೃತಿಗಳನ್ನು ಡಿ.16ರಂದು ಅನಾವರಣಗೊಳಿಸಲಾಯಿತು.
ಹಾಗೂ ಮರುವಿನ್ಯಾಸಗೊಂಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಭಾರತದ ಅಧ್ಯಾತ್ಮಿಕ ಹಾಗೂ ತತ್ವಜ್ಞಾನಿಗಳಾದ ಸ್ವಾಮಿ ವಿವೇಕಾನಂದ, ಅಪ್ರತಿಮ ಸ್ವಾತಂತ್ರ‍್ಯ ಹೋರಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವರ್ಣಚಿತ್ರಗಳನ್ನು ಸಹ ಅನಾವರಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.