ಮನಮೋಹನ್ ಸಿಂಗ್ ಆಡಳಿತದಲ್ಲಿ ದೇಶದ ಜಿಡಿಪಿ ಶೇ.7.7ರಷ್ಟು ಮುಟ್ಟಿತ್ತು : ವೀರಪ್ಪ ಮೊಯ್ಲಿ

Update: 2024-12-27 15:53 GMT

ಬೆಳಗಾವಿ : ಮನಮೋಹನ್ ಸಿಂಗ್ ಅವರು ಭಾರತದ ಅನರ್ಘ್ಯ ರತ್ನ, ಇವರು ಜಗತ್ತಿನ ಪ್ರಥಮ ಹಂತದ ಆರ್ಥಿಕ ತಜ್ಞ. ಸೋನಿಯಾ ಗಾಂಧಿ ಅವರ ಒಟ್ಟಿಗೆ ಸೇರಿ ಪಕ್ಷ ಕಟ್ಟಿದವರು. ಇವರ ಆಡಳಿತ ಕಾಲದಲ್ಲಿ ಜಿಡಿಪಿ ಶೇ 7.7ಕ್ಕೆ ಮುಟ್ಟಿ ದಾಖಲೆ ಬರೆದಿತ್ತು ಎಂದು ಮಾಜಿ ಸಿಎಂ ಡಾ.ಎಂ. ವೀರಪ್ಪ ಮೊಯ್ಲಿ ತಿಳಿಸಿದರು.

ಗುರುವಾರ ನಗರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿಯೇ ನಮ್ಮ ದೇಶ ಆರ್ಥಿಕ ಬೆಳವಣಿಗೆಯಲ್ಲಿ ಮುಂದಿದೆ ಎಂದರೆ ಅದಕ್ಕೆ ಮನಮೋಹನ ಸಿಂಗ್ ಕಾರಣ. ಅತ್ಯಂತ ಕಡುಬಡವರಾಗಿ ಬೆಳೆದರೂ ಕಷ್ಟದಿಂದ ಉನ್ನತ ಮಟ್ಟಕ್ಕೆ ಬೆಳೆದವರು. ಈ ದೇಶದ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕು ಎಂದು ಲೋಕ್ ಪಾಲ್ ಎನ್ನುವ ಅತ್ಯುತ್ತಮ ಸಂಸ್ಥೆ ರೂಪಿಸಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ಜಗತ್ತಿನ ಇತಿಹಾಸದಲ್ಲಿ ಇವರ ಹೆಸರು ಅಜರಾಮರ. ಬಡವರ ನಾಡಿ ಮಿಡಿತವನ್ನು ಹಿಡಿದು ಕೆಲಸ ಮಾಡಿದವರು. ದೇಶದಲ್ಲಿ ಆಧಾರ್ ಕಾರ್ಡ್ ಪರಿಚಯಿಸಿದರು. ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ನರೇಗಾ ಸೇರಿದಂತೆ ಅನೇಕ ಕಾನೂನು ತಂದರು. ಆಮೂಲಕ ಆಡಳಿತಕ್ಕೆ ಪಾರದರ್ಶಕತೆ ತಂದರು. ಅವರ ಆದರ್ಶ ಜೀವನ ಎಲ್ಲರಿಗೂ ಸ್ಫೂರ್ತಿ ಎಂದು ಅವರು ಹೇಳಿದರು.

ನಾನು 15 ವರ್ಷಗಳ ಕಾಲ ಅವರ ಜತೆ ಕೆಲಸ ಮಾಡಿದ್ದೇನೆ. ಅವರು ರಿಸರ್ವ ಬ್ಯಾಂಕಿನ ಗವರ್ನರ್ ಆಗಿದ್ದಾಗ ಕರ್ನಾಟಕದ ಆಲಮಟ್ಟಿ ಆಣೆಕಟ್ಟು ನಿರ್ಮಾಣಕ್ಕೆ ದೇಶದಲ್ಲೇ ಮೊದಲ ಬಾರಿಗೆ ನೀರಾವರಿ ಬಾಂಡ್ ಮಂಜೂರು ಮಾಡಿ 2 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವಂತೆ ಮಾಡಿದರು. ಮನಮೋಹನ್ ಸಿಂಗ್ ಸದಾ ಆದರ್ಶದ ಧೃವ ನಕ್ಷತ್ರವಾಗಿ ನಿಲ್ಲಲಿದ್ದಾರೆ ಎಂದು ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಭಾರತವನ್ನು ಸಂಪತ್ತುಭರಿತ ರಾಷ್ಟ್ರವನ್ನಾಗಿ ಮಾಡಿರುವ ಜಗತ್ತಿನ ಶ್ರೇಷ್ಠರತ್ನ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್‍ರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಜಗತ್ತು ಕಂಡ ಶ್ರೇಷ್ಠ ಜ್ಞಾನಿ. ಅವರ ಮಾರ್ಗದರ್ಶನ ಕೇವಲ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಅಮೂಲ್ಯವಾಗಿತ್ತು ಎಂದು ಹೇಳಿದರು.

ಬಡ ಕುಟುಂಬದಲ್ಲಿ ಜನಿಸಿದರೂ ರಾಜಕಾರಣದಲ್ಲಿ ಉನ್ನತ ಹುದ್ದೆ ತೆಗೆದುಕೊಂಡಾಗ ರಾಜಕೀಯ ಲಾಭಕ್ಕೆ ಬಡತನದ ಅನುಕಂಪವನ್ನು ಪಡೆಯಲಿಲ್ಲ. ದೇಶದಲ್ಲಿ ಬಡತನವನ್ನು ಕಿತ್ತೊಗೆಯಲು ಶ್ರಮಿಸಿದರು. ದೇಶದಲ್ಲಿ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ 18 ಕೋಟಿ ಮಧ್ಯಮ ವರ್ಗದ ಜನರಿದ್ದರು. ಅವರು ಅಧಿಕಾರ ಬಿಡುವ ಸಂದರ್ಭದಲ್ಲಿ ದೇಶದಲ್ಲಿ 36 ಕೋಟಿ ಜನರನ್ನು ಮಧ್ಯಮ ವರ್ಗದಲ್ಲಿದ್ದರು ಎಂದು ಅವರು ಹೇಳಿದರು.

ಬಡರಾಷ್ಟ್ರ ಎಂದು ಹಣೆಪಟ್ಟಿ ಹೊಂದಿದ್ದ ಭಾರತವನ್ನು ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕೊಂಡೊಯ್ದರು. ಭಾರತೀಯರಿಗೆ ಉದ್ಯೋಗ ಖಾತರಿ, ಶೈಕ್ಷಣಿಕ ಹಕ್ಕು, ಆಹಾರದ ಹಕ್ಕು, ಮಾಹಿತಿ ಹಕ್ಕು ಕೊಟ್ಟ ಧೀಮಂತ ನಾಯಕ. ಇವುಗಳ ಮೂಲಕ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ದರು ಎಂದು ಅವರು ಹೇಳಿದರು.

ಸೋನಿಯಾ ಗಾಂಧಿ ಅವರು ದೂರದೃಷ್ಟಿಯಿಂದ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟರು. ಆಮೂಲಕ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟರು. ವಿರೋಧ ಪಕ್ಷಗಳು ಅವರನ್ನು ಮೌನಿ ಬಾಬಾ ಎಂದು ಟೀಕಿಸಿದಾಗ, ಜನರು ಅವರನ್ನು ಜ್ಞಾನಿ ಬಾಬಾ ಎಂದು ಕರೆದರು. ಸಿಂಗ್ ಇಸ್ ಕಿಂಗ್ ಎಂದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಮನಮೋಹನ್ ಸಿಂಗ್ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಆರ್ಥಿಕ ಸಲಹೆಗಾರರು. ಅಮೆರಿಕ ಆರ್ಥಿಕ ಸಮಸ್ಯೆಯಿಂದ ಹೊರಬಂದಿದ್ದರೆ ಅದು ಮನಮೋಹನ್ ಸಿಂಗ್ ಅವರ ಮಾರ್ಗದರ್ಶನದಿಂದ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News