ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ, ತಕ್ಷಣ ಅವರನ್ನು ಕೆಳಗಿಳಿಸಿ : ರಮೇಶ್​ ಜಾರಕಿಹೊಳಿ

Update: 2024-12-02 12:51 GMT

ರಮೇಶ್​ ಜಾರಕಿಹೊಳಿ

ಬೆಳಗಾವಿ: "ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ತಕ್ಷಣವೇ ಬದಲಾವಣೆ ಮಾಡಬೇಕು" ಎಂದು ಶಾಸಕ ರಮೇಶ್​ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ ವಿಜಯೇಂದ್ರ, ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿಕೊಂಡು ಶೋಕಿ ಮಾಡಲು ಲಾಯಕ್ಕಾದ ಮನುಷ್ಯ. ಇನ್ನೂ ನಾಲ್ಕು ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಿ" ಎಂದರು.

"ತನ್ನ ಬೆನ್ನಿಗೆ ನಿಲ್ಲುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಹಿಂದುಳಿದ ಹಾಗೂ ಪರಿಶಿಷ್ಟ ನಾಯಕರಿಗೆ ಬೆದರಿಕೆ ಹಾಕಿದ್ದಾರೆ. ಅವರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ‌ ಸಮುದಾಯದವರೇ ಹೊರತು; ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಅಲ್ಲದೆ, ರೇಣುಕಾಚಾರ್ಯ ರಾಜಕೀಯ ‌ಅಸ್ತಿತ್ವಕ್ಕಾಗಿ ವಿಜಯೇಂದ್ರ ಜೊತೆಗಿದ್ದಾರೆ" ಎಂದು ಹೇಳಿದರು.

ಯತ್ನಾಳ್‌ಗೆ ಶೋಕಾಸ್ ನೋಟೀಸ್ ವಿಚಾರವಾಗಿ ಮಾತನಾಡಿದ ಅವರು, ಶೋಕಾಸ್ ನೋಟಿಸ್ ಇವತ್ತು ಬಂದಿದ್ದಲ್ಲ. ಅಲ್ಲದೆ, ಅವರು ಪಕ್ಷದ ವರಿಷ್ಠರಿಗೆ ಸೂಕ್ತ ಸ್ಪಷ್ಟನೆ ನೀಡುತ್ತಾರೆ. ನಾವು ಯತ್ನಾಳ್‌ ಪರವಾಗಿ ನಿಲ್ಲುತ್ತೇವೆ. ಪಕ್ಷದ ವರಿಷ್ಠರಿಗೆ ಮಾಹಿತಿ ನೀಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News