ಅಧಿವೇಶನದಲ್ಲಿ ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲಿದ್ದೇವೆ : ಆರ್.ಅಶೋಕ್
ಬೆಳಗಾವಿ : ಅನುದಾನದಲ್ಲಿ ತಾರತಮ್ಯ ಮತ್ತು ಇತರ ವಿಷಯಗಳ ಕುರಿತು ಇಲ್ಲಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಬಿಜೆಪಿ ಜನಪ್ರತಿನಿಧಿಗಳ ಸಭೆ ಇಂದು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎಂದು ಅವರು ತಿಳಿಸಿದರು. ಹೆಚ್ಚಿನ ಶಾಸಕರು ಅನುದಾನದ ತಾರತಮ್ಯ ಆಗುತ್ತಿದೆ ಎಂದು ತಿಳಿಸಿದ್ದಾರೆ ಎಂದರು.
ಅನುದಾನ ಇಲ್ಲದ ಕಾರಣ ರಸ್ತೆ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ಅತಿವೃಷ್ಟಿ ಬಂದರೂ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವುಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಕೋರಿದ್ದಾರೆ. ಇದಲ್ಲದೆ, ಬಾಣಂತಿಯರ ಸಾವು, ಮಕ್ಕಳ ಸಾವಿನ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ಅಧಿವೇಶನ ಎಂದೊಡನೆ ಮಲೆನಾಡು ಪ್ರದೇಶದ ವಿಚಾರ ಚರ್ಚೆಗೆ ಬರುತ್ತಿಲ್ಲ ಎಂದಿದ್ದಾರೆ. ಅದನ್ನು ಕೂಡ ಚರ್ಚಿಸುತ್ತೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ದುಡ್ಡು ಕೊಡದೆ ಏನು ಕೆಲಸವೂ ಆಗುತ್ತಿಲ್ಲ ಎಂದು ದೂರಿದ್ದಾರೆ. ಗುತ್ತಿಗೆದಾರರು ಲಂಚ ಕೊಟ್ಟು ಕೆಲಸ ಗುತ್ತಿಗೆ ಪಡೆಯುತ್ತಿದ್ದಾರೆ. ಶಾಸಕರಿಗೆ ಗೌರವ ಇಲ್ಲ ಎಂಬ ವಿಚಾರವೂ ಚರ್ಚೆ ಮಾಡಲು ಕೋರಿದ್ದಾರೆ ಎಂದು ಹೇಳಿದರು. ತಾರತಮ್ಯ ಮತ್ತು ಕೃಷ್ಣಾ ಯೋಜನೆಗೆ (ಯುಕೆಪಿ) ಹಣ ನೀಡದೆ ಇರುವ ಕುರಿತು ಕೂಡ ಚರ್ಚೆ ನಡೆದಿದ್ದು ಇವೆಲ್ಲವುಗಳನ್ನು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.
ಯತ್ನಾಳ್, ರಮೇಶ್ ಜಾರಕಿಹೊಳಿ ಫೊನ್‌ನಲ್ಲಿ ಮಾತನಾಡಿದ್ದಾರೆ :
ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ನನ್ನ ಜೊತೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ಸಭೆಗೆ ಬರಲಾಗುವುದಿಲ್ಲ, ಮುಂದಿನ ಬಾರಿ ಬರುವುದಾಗಿ ಹೇಳಿದ್ದಾರೆ. ಶಾಸಕರಿಗೆ ಸಮಸ್ಯೆಗಳಿದ್ದರೆ ಬಂದು ಮಾತನಾಡಿ ಎಂದು ಅಧ್ಯಕ್ಷರೂ ಹೇಳಿದ್ದಾರೆ ಎಂದು ತಿಳಿಸಿದರು. ಇವತ್ತಿನ ಅಸೆಂಬ್ಲಿಯಲ್ಲಿ ನಾವೆಲ್ಲರೂ ಒಟ್ಟಾಗಿ ಹೋಗಿದ್ದೇವೆ ಎಂದು ವಿವರಿಸಿದರು.