ಶೈಕ್ಷಣಿಕ ವಲಯದಲ್ಲಿ ಎಸ್ಸೆಸ್ಸೆಫ್ ಸೇವೆ ಶ್ಲಾಘನೀಯ: ಝಮೀರ್ ಅಹ್ಮದ್
ಬೆಂಗಳೂರು, ಸೆ.10: ಶೈಕ್ಷಣಿಕ ವಲಯದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಸೇವೆ ಶ್ಲಾಘನೀಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ರವಿವಾರ ಆಯೋಜಿಸಿದ್ದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕಳೆದ ಐವತ್ತು ವರ್ಷಗಳಿಂದ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿರುವ ಈ ಸಂಸ್ಥೆ ಇಡೀ ವಿಶ್ವಕ್ಕೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.
ಅಲ್ಪಸಂಖ್ಯಾತರ ಸಮುದಾಯ ಶಿಕ್ಷಣದಲ್ಲಿ ಹಿಂದೆ ಇದೆ. ಶಿಕ್ಷಣ ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಅಂತಹ ಕೆಲಸ ಎಸ್ಸೆಸ್ಸೆಫ್ ನಿಂದ ಆಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.
ಎಸ್ಸೆಸ್ಸೆಫ್ ನಾಯಕರಾದ ವಿದ್ವಾಂಸ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಒಂದು ದೊಡ್ಡ ಶಕ್ತಿ ಆಗಿದ್ದಾರ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಶಿಕ್ಷಣ ವಿಚಾರದಲ್ಲಿ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಸಮುದಾಯದ ಮಕ್ಕಳು ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ದಿಂದ ವಂಚಿತ ರಾಗಬಾರದು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇರಳದಲ್ಲಿ ಮದ್ರಸ ಶಿಕ್ಷಣ ಎಲ್ಲರಿಗೂ ಮಾದರಿ. ನಮ್ಮ ರಾಜ್ಯದಲ್ಲೂ ಮದ್ರಸಗಳಲ್ಲಿ ಕನ್ನಡ ಕಲಿಸಲು ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲೂ ಮದ್ರಸ ಬೋರ್ಡ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಝಮೀರ್ ಅಹ್ಮದ್ ಹೇಳಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಮಾತನಾಡಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸಾವಿರಾರು ಮದ್ರಸ ನಡೆಸುತ್ತಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ನಮ್ಮ ಸದಸ್ಯರು ಸಮಾಜಕ್ಕೆ ಮಾರಕ ಆಗುವ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾದ ಉದಾಹರಣೆ ಇಲ್ಲ ಎಂದು ಹೇಳಿದರು.
ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಲೀಲುಲ್ ಬುಖಾರಿ ತಂಙಳ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮಾಜಿ ಅಧ್ಯಕ್ಷ ಶಾಫಿ ಸಅದಿ, ಮುಫ್ತಿ ಅಬೂಬಕರ್, ನಾಸಿರ್ ಲಕ್ಕಿ ಸ್ಟಾರ್ ಮತ್ತಿತರರು ಉಪಸ್ಥಿತರಿದ್ದರು.