ಬೆಂಗಳೂರು | ತಳ್ಳುಗಾಡಿ ಮೇಲೆ ಗೋಡೆ ಸಹಿತ ಬಿದ್ದ ನೀರಿನ ಟ್ಯಾಂಕ್: ಇಬ್ಬರು ಮೃತ್ಯು, ಇನ್ನಿಬ್ಬರು ಗಂಭೀರ
ಬೆಂಗಳೂರು, ಆ.3: ನಾಲ್ಕು ಅಂತಸ್ತಿನ ಕಟ್ಟಡದ ಚಾವಣಿಯಲ್ಲಿದ್ದ ನೀರಿನ ಟ್ಯಾಂಕ್ ವೊಂದು ಗೋಡೆ ಸಮೇತ ಕುಸಿದು ಕೆಳಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಾಜಿ ನಗರ ಬಸ್ ನಿಲ್ದಾಣ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ತಳ್ಳುಗಾಡಿ ವ್ಯಾಪಾರಿ ಅರುಳ್ (50) ಹಾಗೂ ಅಲ್ಲಿಗೆ ಬಂದಿದ್ದ ಗ್ರಾಹಕ ಕಮಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದ ರಸ್ತೆಬದಿಯಲ್ಲಿ ಅರುಳ್ ತಳ್ಳುಗಾಡಿಯಲ್ಲಿ ಎಗ್ರೈಸ್ ವ್ಯಾಪಾರ ಮಾಡುತ್ತಿದ್ದರು. ಕಳೆದ ರಾತ್ರಿ ಇದೇ ಸ್ಥಳದಲ್ಲಿ ಅರುಳ್ ವ್ಯಾಪಾರ ಮಾಡುತ್ತಿದ್ದ ವೇಳೆ ಕಟ್ಟಡದ ಚಾವಣಿಯಲ್ಲಿದ್ದ ನೀರಿನ ಟ್ಯಾಂಕ್ ಗೋಡೆ ಸಮೇತ ಕುಸಿದು ಅರುಲ್ ಹಾಗೂ ಅಲ್ಲಿ ಎಗ್ ರೈಸ್ ತಿನ್ನಲು ಬಂದಿದ್ದ ಕಮಲ್ ಸೇರಿದಂತೆ ನಾಲ್ವರ ಮೈಮೇಲೆ ಬಿದ್ದಿದೆ. ಇದರಿಂದ ಅರುಲ್ ಮತ್ತು ಕಮಲ್ ಮತ್ತು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.