ಬೆಂಗಳೂರು: ಫುಟ್ ಪಾತ್ ನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಜೀವ ದಹನ
ಬೆಂಗಳೂರು, ನ.19: ರಸ್ತೆ ಬದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ ತಾಯಿ ಮತ್ತು ಮಗು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಓ ಫಾರ್ಮ್ ಬಳಿ ಇಂದು ಮುಂಜಾನೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ಓ ಫಾರ್ಮ್ ಸರ್ಕಲ್ ನ ಗೋಪಾಲನ್ ಕಾಲನಿಯ ನಿವಾಸಿಗಳಾದ ಸೌಂದರ್ಯ(23) ಮತ್ತು ಅವರ ಪುತ್ರಿ ಸುವಿಕ್ಸ ಲಿಯ(9 ತಿಂಗಳು) ಎಂದು ಗುರುತಿಸಲಾಗಿದೆ. ತಮಿಳುನಾಡಿಗೆ ತೆರಳಿದ್ದ ಸೌಂದರ್ಯ ಮತ್ತು ಅವರ ಪುತ್ರಿ ಲೀಲಾ ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಬಸ್ಸಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು. ಬಳಿಕ ತಾಯಿ-ಮಗಳು ಫುಟ್ ಪಾತ್ ನಲ್ಲಿ ನಡೆದುಕೊಂಡು ಮನೆಯತ್ತ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದರೂ ವಿದ್ಯುತ್ ಸಂಪರ್ಕ ಮೊಟಕುಗೊಂಡಿರಲಿಲ್ಲ. ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗಳು ಈ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ ಅವರಿಬ್ಬರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಘಟನೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಡುಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಠಾಣಾ ಪೊಲೀಸರು, ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.