ಬ್ರಾಹ್ಮಣ ಸಮಾಜದ ವಿಚಾರ ಬಂದಾಗ ನಾವೆಲ್ಲ ಒಂದಾಗೋಣ: ಸಚಿವ ದಿನೇಶ್ ಗುಂಡೂರಾವ್ ಕರೆ

Update: 2023-06-24 15:44 GMT

ಬೆಂಗಳೂರು, ಜೂ.24: ಬ್ರಾಹ್ಮಣ ಸಮಾಜದ ವಿಚಾರ ಬಂದರೆ ನಾವೆಲ್ಲರೂ ಒಗ್ಗೂಡಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತರಾದ ಬ್ರಾಹ್ಮಣ ಸಮುದಾಯದ ಶಾಸಕರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಶನಿವಾರ ಇಲ್ಲಿನ ಬಸವನಗುಡಿಯ ಎಪಿಎಸ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣ ಸಮುದಾಯದಲ್ಲಿ ಹಲವು ಮಂದಿ ಸಾಧಕರಿದ್ದಾರೆ. ಹೀಗಾಗಿ, ಎಲ್ಲರೂ ಜತೆಗೂಡಿ ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ಕೈಜೋಡಿಸಬೇಕು. ಇನ್ನೂ, ನಮ್ಮ ಸರಕಾರ ಐದು ವರ್ಷ ಇರುತ್ತದೆ. ಬ್ರಾಹ್ಮಣ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಸರಕಾರ ಸಹಾಯ, ಸಹಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ ಸರಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿ. ಆನಂತರ, ಅನುದಾನ ಜಾರಿಗೊಳಿಸಿ ಇದರ ಅಡಿಯಲ್ಲಿ ಸಮುದಾಯದವರಿಗೆ ಹೆಚ್ಚಿನ ಅನುಕೂಲ, ಪ್ರಗತಿಗೆ ಕೆಲಸ ಮಾಡೋಣ ಎಂದು ಸಚಿವರು ನುಡಿದರು.

ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಈಗಿನ ಪರಿಸ್ಥಿತಿಯ ರಾಜಕಾರಣದಲ್ಲಿ ಬ್ರಾಹ್ಮಣರು ಬರುವುದು ಕಷ್ಟಕರ. ಆದರೂ ಇಂತಹ ಪೈಪೋಟಿಯಲ್ಲಿ ರಾಜ್ಯದಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದವರು ಗೆದ್ದಿರುವುದು ಸಂತೋಷಕರ ಸಂಗತಿ. ಬ್ರಾಹ್ಮಣರು ಜಾತಿ ಭೇದಬಾವ ಮಾಡುವುದಿಲ್ಲ, ವಿಶ್ವದಲ್ಲಿ ಇರುವವರು ಎಲ್ಲರು ಒಂದೇ ಎಂದು ಬಾಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆ, ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ,ಉದಯ್ ಗರುಡಾಚಾರ್ ಸೇರಿದಂತೆ ಪ್ರಮುಖರನ್ನು ಸನ್ಮಾನಿಸಲಾಯಿತು. ಮೇಲುಕೋಟೆಯ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News