ಚಾತುರ್ವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣ ವಂಚಿತರನ್ನಾಗಿಸಿತ್ತು: ಸಿಎಂ ಸಿದ್ದರಾಮಯ್ಯ

Update: 2023-07-02 16:31 GMT

ಬೆಂಗಳೂರು, ಜು.2: ‘ಚಾತುರ್ವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಪುರಭವನದಲ್ಲಿ ಫ.ಗು.ಹಳಕಟ್ಟಿ ಫೌಂಡೇಶನ್ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅತ್ಯಂತ ಕೆಳಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿ ಪ್ರಮುಖರು ಎಂದು ಸ್ಮರಿಸಿದರು.

ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

 

ಪ್ರಶಸ್ತಿ ಪುರಸ್ಕತರಾದ ವಚನ ಕ್ಷೇತ್ರದಲ್ಲಿ ಮಹತ್ವದ ಮೌಲ್ಯಯುತ ಸಾಹಿತ್ಯಿಕ ಕೆಲಸ ಮಾಡಿರುವ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್ ತಂಗಡಗಿ, ವಚನಕಾರ ಫ.ಗು.ಹಳಕಟ್ಟಿ ಕುಟುಂಬಸ್ಥರಾದ ಶೀಲಾ ಹಳಕಟ್ಟಿ, ಪವಿತ್ರ ಹಳಕಟ್ಟಿ ಸೇರಿ ಹಲವರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News