ಬೆಂಗಳೂರು | ಕೋಟ್ಯಂತರ ರೂ.ಮೌಲ್ಯದ ಮಾದಕ ವಸ್ತುಗಳ ನಾಶ: ಆರೋಪಿಗಳ ಬಂಧನ
ಬೆಂಗಳೂರು, ಜೂ.26: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನದ ಹಿನ್ನೆಲೆ, ಬೆಂಗಳೂರು ನಗರ ಪೊಲೀಸರು ಮಾದಕ ಸರಬರಾಜುಗಾರರು ಮತ್ತು ಮಾದಕ ವ್ಯಸನಿಗಳ ವಿರುದ್ಧ ಕೈಗೊಳ್ಳಲಾಗಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮತ್ತು ನಾಶಪಡಿಸಲಿರುವ ಮಾದಕ ವಸ್ತುಗಳನ್ನು ಸೋಮವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರದರ್ಶಿಸಲಾಯಿತು.
ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2022 ಮತ್ತು 2023ನೇ ಸಾಲಿನಲ್ಲಿ (ಜೂನ್ 22ರವರೆಗೆ) ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 6,191 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 7,723 ಭಾರತೀಯರು ಹಾಗೂ 159 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದರು.
6,191 ಪ್ರಕರಣಗಳ ಪೈಕಿ ಅವುಗಳಲ್ಲಿ 943 ಪ್ರಕರಣಗಳನ್ನು ಮಾದಕ ಸರಬರಾಜುಗಾರರ ವಿರುದ್ಧ ಹಾಗೂ 5,248 ಪ್ರಕರಣಗಳನ್ನು ಮಾದಕ ಪದಾರ್ಥ ಸೇವನೆ ಮಾಡುವವರ ವಿರುದ್ಧ ದಾಖಲಿಸಲಾಗಿದೆ. ಆರೋಪಿಗಳಿಂದ ಅಂದಾಜು 117 ಕೋಟಿ ರೂ. ಮೌಲ್ಯದ ಬೆಲೆಬಾಳುವ 6,261 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಯಾನಂದ್ ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಡ್ರಗ್ಸ್ ಡಿಸ್ಟೋಸಲ್ ಕಮಿಟಿಗೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ ಒಟ್ಟು 21 ಕೋಟಿ ರೂ. ಮೌಲ್ಯದಷ್ಟು ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ದಯಾನಂದ್ ತಿಳಿಸಿದರು.
ಮಾದಕ ದಂಧೆಯ ವಿರುದ್ಧ ನಿರಂತರ ಸಮರ ಸಾರಿರುವ ಬೆಂಗಳೂರು ನಗರ pಲೀಸ್ ಸಿಬ್ಬಂದಿಗಳು ಕಳೆದ ಒಂದು ತಿಂಗಳಿನಿಂದ ನಗರದ ವಿದ್ಯಾಸಂಸ್ಥೆಗಳ ಬಳಿ ಮಾದಕ ವಸ್ತು ಪದಾರ್ಥಗಳ ಮಾರಾಟ ಸೇವನೆ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಿದ್ದಾರೆ ಎಂದು ದಯಾನಂದ್ ಹೇಳಿದರು.
ಕಳೆದ ಒಂದು ವರ್ಷದಲ್ಲಿ 6074.685 ಕೆ.ಜಿ. ಗಾಂಜಾ, 5.5 ಕೆ.ಜಿ ಗಾಂಜಾ ಆಯಿಲ್, 2.554 ಕೆ.ಜಿ ಬ್ರೌನ್ ಶುಗರ್, 15.689 ಕೆ.ಜಿ ಅಫೀಂ, 52.689 ಕೆಜಿ ಎಂಡಿಎಂಎ, 109.914 ಕೆ.ಜಿ ಸಿಂಥೆಟಿಕ್ ಡ್ರಗ್ಸ್, 3406 ವಿವಿಧ ರೀತಿಯ ಮಾತ್ರೆಗಳು ಹಾಗೂ 1372 ಎಲ್‍ಎಸ್‍ಡಿ ಸ್ಟ್ರಿಪ್ಸ್ ವಶಕ್ಕೆ ಪಡೆಯಲಾಗಿದೆ ಎಂದು ದಯಾನಂದ್ ಮಾಹಿತಿ ನೀಡಿದರು.
ಇವುಗಳಲ್ಲಿ 2053.486 ಕೆ.ಜಿ ಗಾಂಜಾ, 1.302 ಕೆ.ಜಿ ವೀಡ್ ಆಯಿಲ್, 9.232 ಕೆಜಿ ಹಾಫ್ ಆಯಿಲ್, 23 ಗ್ರಾಂ. ಬ್ರೌನ್ ಶುಗರ್, 12.278 ಕೆ.ಜಿ ಅಫೀಮು, 9.325 ಕೆ.ಜಿ ಚರಸ್, 568 ಗ್ರಾಂ. ಕೊಕೈನ್, 13 ಗ್ರಾಂ. ಹೆರಾಯ್ಡ್, 5.353 ಕೆ.ಜಿ ಎಂಡಿಎಂಎ, 29 ಎಂಡಿಎಂಎ ಮಾತ್ರೆಗಳು, 137 ಎಕ್ಸೆಸಿ ಮಾತ್ರೆಗಳು, 931 ಗ್ರಾಂ. ಎಕ್ಸಟೆಸಿ ಪೌಡರ್, 654 ಗ್ರಾಂ. ಮೆತಾಕ್ವೆಲಾನ್, 13 ಗ್ರಾಂ. ಎಲ್‍ಎಸ್‍ಡಿ ಸ್ಟ್ರಿಪ್ ಪೌಡರ್ ಹಾಗೂ 93 ಎಲ್ ಎಸ್‍ಎಡಿ ಸ್ಟ್ರಿಪ್ಸ್ ಮತ್ತು 24.300 ಕೆಜಿ ಎಸ್ಕಾಫ್ ಸಿರಪ್ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ನ್ಯಾಯಾಲಯದ ಆದೇಶದನ್ವಯ ಈ ಮಾದಕ ವಸ್ತುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ ಎಂದು ವಿವರಿಸಿದರು.
2023ರ ಮಾರ್ಚ್ 24ರಂದು ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್ ವತಿಯಿಂದ ಏರ್ಪಡಿಸಲಾಗಿದ್ದ ದಕ್ಷಿಣ ರಾಜ್ಯಗಳ ಮಾದಕ ಸಾಗಾಣಿಕೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಅಂಗವಾಗಿ ಸುಮಾರು 92 ಕೋಟಿ ರೂ. ಮೌಲ್ಯದ ವಿವಿಧ ಬಗೆಯ 4397.855 ಕೆ.ಜಿ ತೂಕದ ಮಾದಕ ವಸ್ತುಗಳು ಹಾಗೂ 8,199 ವಿವಿಧ ರೀತಿಯ ಮಾತ್ರೆಗಳು ಮತ್ತು 584 ಎಲ್‍ಎಸ್‍ಡಿ ಸ್ಟ್ರಿಪ್ಸ್ ನಾಶಪಡಿಸಲಾಗಿತ್ತು ಎಂದು ದಯಾನಂದ್ ತಿಳಿಸಿದರು.