ನಿಗಮ ಮಂಡಳಿ ನೇಮಕ, ಶಾಸಕರಿಗೆ ಅಧಿಕಾರ ಹಂಚಿಕೆ ಬಗ್ಗೆ ಮೊದಲ ಸುತ್ತಿನ ಚರ್ಚೆ: ಡಿ.ಕೆ.ಶಿವಕುಮಾರ್

Update: 2023-11-22 06:13 GMT

ಬೆಂಗಳೂರು, ನ.22: "ಪಕ್ಷದ ಸಂಘಟನೆ, ನಿಗಮ ಮಂಡಳಿ ನೇಮಕ ಸೇರಿದಂತೆ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. ಶಾಸಕರಿಗೆ ಜವಾಬ್ದಾರಿ ನೀಡುವ ಬಗ್ಗೆ ಮೊದಲ ಸುತ್ತಿನ ಚರ್ಚೆ ಆಗಿದ್ದು, ಈಗಿನ ಪಟ್ಟಿಯನ್ನು ಕೇಂದ್ರ ನಾಯಕರು ಪರಿಶೀಲಿಸಲಿದ್ದಾರೆ. ನಂತರ ಎರಡನೇ ಸುತ್ತಿನ ಚರ್ಚೆ ಆಗಲಿದೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಂಬಂಧಿಸಿ ನಡೆದ ಸಭೆಯ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

ಈ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯಾವಕಾಶ ಬೇಕು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, "ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಹಾಗೂ ನಾನು ಪ್ರಚಾರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಮಾಡುತ್ತೇವೆ" ಎಂದರು.

ಗೃಹಸಚಿವರು ಮುನಿಸಿಕೊಂಡಿದ್ದಾರೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆಯಲ್ಲ ಎಂದು ಕೇಳಿದಾಗ, "ಗೃಹಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯಿಂದ ಬಂದು ಚರ್ಚೆ ಮಾಡಿದ್ದಾರೆ. ಯಾರು ಯಾಕೆ ಮುನಿಸಿಕೊಳ್ಳುತ್ತಾರೆ" ಎಂದು ಕೇಳಿದರು.

ಲೋಕಸಭೆ ಚುನಾವಣೆ ಸಂಬಂಧದ ವರದಿ ಬಗ್ಗೆ ಕೇಳಿದಾಗ, "ಕೆಲವರು ತಮ್ಮ ವರದಿ ನೀಡಿದ್ದು, ಮತ್ತೆ ಕೆಲವರು ಇನ್ನಷ್ಟೇ ನೀಡಬೇಕಿದೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News