ಉಪಹಾರಕೂಟ ಸಭೆಯಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಚರ್ಚೆ, ಅನಗತ್ಯ ಹೇಳಿಕೆಗೆ ಬ್ರೇಕ್ ಗೆ ಸೂಚನೆ: ಡಿ.ಕೆ.ಶಿವಕುಮಾರ್

Update: 2023-11-04 10:11 GMT

ಬೆಂಗಳೂರು, ನ.4: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಹಾಗೂ ಸರಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ, ಅವುಗಳ ಮೇಲ್ವಿಚಾರಣೆ ವಿಚಾರವಾಗಿ ಸಚಿವರ ಜತೆ ಉಪಹಾರ ಕೂಟದ ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಭೆಯ ಬಳಿಕ ಸಿಎಂ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಇನ್ನು ಪಕ್ಷ ಹಾಗೂ ಸರಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿ ನೇರವಾಗಿ ತಿಳಿಸಿದ್ದಾರೆ. ನಾನು ಸೇರಿದಂತೆ ಯಾರೊಬ್ಬರೂ ಈ ವಿಚಾರವಾಗಿ ಮಾತನಾಡುವುದು ಬೇಡ. ಮಾಧ್ಯಮಗಳು ಪ್ರಶ್ನೆ ಕೇಳುತ್ತವೆ, ಆದರೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ. ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ ಸಚಿವರುಗಳಿಗೆ ತಮ್ಮ ಜಿಲ್ಲಾ ಪ್ರವಾಸ ಮಾಡಲು ಸೂಚನೆ ನೀಡಿದ್ದೆವು. ಕೆಲ ಸಚಿವರ ಪ್ರವಾಸಕ್ಕೆ ಸಮಿತಿ ಜೋಡಿಸಿರಲಿಲ್ಲ. ಈಗ ಸಮಿತಿಯಲ್ಲಿ ಸೇರಿಸುವ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಡಿಕೆಶಿ ತಿಳಿಸಿದರು.

ಸಕಾರದ ಗ್ಯಾರಂಟಿ ಯೋಜನೆಗಳ ಜಾರಿ ಹಾಗೂ ಅವುಗಳನ್ನು ಜನರಿಗೆ ತಲುಪಿಸುವುದರ ಬಗ್ಗೆ ಪರಿಶೀಲನೆ ಸಭೆ ಮಾಡುವಂತೆ ಸೂಚಿಸಲಾಗಿದೆ. ಇಂದು ಕೇವಲ 15 ಸಚಿವರ ಜತೆ ಚರ್ಚೆ ಮಾಡಲಾಗಿದ್ದು, ಉಳಿದವರ ಜತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಲೋಕಸಭೆ ಚುನಾವಣೆ, ಗ್ಯಾರಂಟಿ ಯೋಜನೆ ಜಾರಿ ನಮ್ಮ ಪ್ರಮುಖ ಆದ್ಯತೆ ಎಂದವರು ಹೇಳಿದರು.

ಪಕ್ಷದ ಶಾಸಕರು, ಸಚಿವರಿಗೆ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅನಗತ್ಯವಾಗಿ ಹೇಳಿಕೆ ನೀಡಿ ತಮ್ಮ ಹಾಗೂ ಪಕ್ಷದ ಭವಿಷ್ಯ ನಾಶ ಮಾಡಿಕೊಳ್ಳುವುದು ಬೇಡ ಎಂದು ಈ ಮೂಲಕ ಹೇಳುತ್ತೇನೆ ಎಂದರು.

ಕೆಲವು ಸಚಿವರು ಮಾತ್ರ ಸಭೆಯಲ್ಲಿ ಭಾಗವಹಿಸಿರುವ ಬಗ್ಗೆ ಕೇಳಿದಾಗ, ಈ ಸಭೆಗೆ ಆಹ್ವಾನ ಕೊಟ್ಟಿದ್ದೇ 15 ಸಚಿವರಿಗೆ. ಎಚ್.ಕೆ ಪಾಟೀಲ್ ಬ್ಯುಸಿ ಇದ್ದ ಕಾರಣ ನಾನೇ ಅವರಿಗೆ ಬರುವುದು ಬೇಡ ಎಂದಿದ್ದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರಿಗೆ ಟಾಸ್ಕ್ ನೀಡಿದ್ದೀರಾ ಎಂದು ಕೇಳಿದಾಗ, “ಲೋಕಸಭೆ ಚುನಾವಣೆಯಲ್ಲಿ ಆಯಾ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಯಾ ಸಚಿವರಿಗೆ ಆ ಜಿಲ್ಲೆ ಜವಾಬ್ದಾರಿ ನೀಡಿಲ್ಲ. ಭೈರತಿ ಸುರೇಶ್ ಕೋಲಾರ ಉಸ್ತುವಾರಿ. ಆದರೆ ಅಭ್ಯರ್ಥಿ ಆಯ್ಕೆ ಸಂಬಂಧ ಅವರಿಗೆ ಮಂಡ್ಯ ಹಾಗೂ ಮೈಸೂರು ಜಿಲ್ಲೆ ನೀಡಲಾಗಿದೆ. ಹಾಸನ ಉಸ್ತುವಾರಿ ರಾಜಣ್ಣ ಅವರಿಗಿದ್ದರೂ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಚೆಲುವರಾಯಸ್ವಾಮಿಯವರಿಗೆ ನೀಡಿದ್ದೇವೆ. ರಾಮನಗರ ಉಸ್ತುವಾರಿ ರಾಮಲಿಂಗಾ ರೆಡ್ಡಿ ಅವರಿದ್ದರೂ ವೆಂಕಟೇಶ್ ಅವರಿಗೆ ಜವಾಬ್ದಾರಿ ನೀಡಿದ್ದೇವೆ. ಜಾರ್ಜ್ ಕೇಂದ್ರ ಚುನಾವಣಾ ಸಮಿತಿಯಲ್ಲಿರುವ ಕಾರಣ ಅವರಿಗೆ ಈ ಜವಾಬ್ದಾರಿ ನೀಡಿಲ್ಲ” ಎಂದು ತಿಳಿಸಿದರು.

ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವಾಗ ವರದಿ ನೀಡುತ್ತಾರೆ ಎಂದು ಕೇಳಿದಾಗ, “ಮೂರ್ನಾಲ್ಕು ದಿನ ಅಥವಾ ಒಂದು ವಾರದಲ್ಲಿ ವರದಿ ನೀಡುವಂತೆ ತಿಳಿಸಿದ್ದೇವೆ. ಪ್ರತೀ ಲೋಕಸಭೆ ಕ್ಷೇತ್ರದಿಂದ 3 ಸಂಭಾವ್ಯ ಅಭ್ಯರ್ಥಿಗಳ ಹೆಸರು ನೀಡುವಂತೆ ಸೂಚಿಸಿದ್ದು, ನಂತರ ನಾವು ಈ ಹೆಸರುಗಳ ಬಗ್ಗೆ ಸಮೀಕ್ಷೆ ಮಾಡಿಸುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ಬರ ಅಧ್ಯಯನ ಪ್ರವಾಸ ಮಾಡಿದ್ದು, ಸಚಿವರು ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದಾಗ, “ನಮ್ಮ ಸಚಿವರು ಬರ ಅಧ್ಯಯನ ಪ್ರವಾಸ ಮಾಡಿಲ್ಲ ಎಂದು ಹೇಳಿದವರು ಯಾರು? ಪ್ರವಾಸ ಮಾಡಿ ಅಧ್ಯಯನ ಮಾಡಿ ಪರಿಶೀಲನೆ ಸಭೆ ಮಾಡಿ ವರದಿ ನೀಡಿದ್ದೇವೆ. ಬಿಜೆಪಿ ನಾಯಕರು ಬರ ಪ್ರವಾಸ ಮಾಡಿದರೆ ಮಾಡಲಿ, ನಾವು ಬೇಡ ಎನ್ನುವುದಿಲ್ಲ. ಅವರು ವಾಸ್ತವಾಂಶ ಅಧ್ಯಯನ ಮಾಡಿ ಕೇಂದ್ರ ಸರ್ಕಾರದಿಂದ ಹಣ ಕೊಡಿಸಲಿ. ಕೇವಲ ಖಾಲಿ ಮಾತನಾಡಿದರೆ ಪ್ರಯೋಜನವಿಲ್ಲ. ಅವರ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಬಳಿ ಒಂದು ದಿನ ಹೋಗಿ ರಾಜ್ಯದ ಹಿತಾಸಕ್ತಿ ಬಗ್ಗೆ ಧ್ವನಿ ಎತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ವಿಚಾರವಾಗಿ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಹೇಳಿಕೆ ಬಿಡಿ. ನಮ್ಮ ರಾಜ್ಯ ಸರ್ಕಾರ ಬಡವರ ಸಹಾಯ ಮಾಡುವ ವಿಚಾರದಲ್ಲಿ ನಾವು ಮುನ್ನಡೆದಿದ್ದೇವೆ. ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಅರ್ಹರಿಗೆ ಉಚಿತ ವಿದ್ಯುತ್ ಬಿಲ್ ಬರುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ.10ರಷ್ಟು ಮಂದಿಗೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆ ಆಗಿದೆ. ಕೆಲವರು ಅಂಚೆ ಖಾತೆ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಪರಿಶೀಲನೆ ಮಾಡಿ ಎಲ್ಲರಿಗೂ ಹಣ ರವಾನೆಯಾಗುವಂತೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ತಿಳಿಸಿದ್ದೇವೆ. ಕೆಲವರು ಹಣ ಬೇಡ ಅಕ್ಕಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅದನ್ನು ಪೂರೈಸಲು ಅಗತ್ಯವಾಗಿರುವ ಟೆಂಡರ್ ಕರೆಯುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ಕಾಂತರಾಜು ವರದಿ ಬಗ್ಗೆ ಸಭೆಯಲ್ಲಿ ಚರ್ಚೆ ಆಯಿತೇ ಎಂದು ಕೇಳಿದಾಗ, “ನಮ್ಮ ಸಮುದಾಯದವರು ಅವರ ಅಭಿಪ್ರಾಯ ಇರುತ್ತದೆ. ನಮ್ಮ ಸರ್ಕಾರ ಜಾತಿ ಗಣತಿ ಮಾಡುತ್ತಿರುವುದು ಸಾಮಾಜಿಕ ಆರ್ಥಿಕ ಸಮೀಕ್ಷೆ. ಈ ವರದಿ ಬಗ್ಗೆ ಅವರಿಗೆ ಅನುಮಾನಗಳಿದ್ದು, ಸರ್ಕಾರ ಅವುಗಳನ್ನು ಬಗೆಹರಿಸುತ್ತದೆ. ಈವರೆಗೂ ವರದಿ ಬಗ್ಗೆ ಸರಿಯಾದ ತೀರ್ಮಾನಗಳಾಗಿಲ್ಲ. ವರದಿ ಇನ್ನು ಸಲ್ಲಿಕೆಯಾಗಿಲ್ಲ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News