ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಮೃತಪಟ್ಟ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ

Update: 2023-06-23 15:55 GMT

ಬೆಂಗಳೂರು, ಜೂ.23: ರಾಜಧಾನಿ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಘಟನೆ ನಡೆದು ಐದು ತಿಂಗಳ ಬಳಿಕ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಸುಮಾರು 1100 ಪುಟಗಳ ದೋಷಾರೋಪಣೆ ಪಟ್ಟಿಯಲ್ಲಿ 11 ಅಧಿಕಾರಿಗಳ ಮೇಲೆ ದೋಷಾರೋಪ ಮಾಡಲಾಗಿದೆ.

ಸುಮಾರು ಐದು ತಿಂಗಳುಗಳ ಕಾಲ ಸುದೀರ್ಘ ತನಿಖೆ ನಡೆಸಿದ್ದ ಗೋವಿಂದಪುರ ಠಾಣಾ ಪೊಲೀಸರು ಕನ್ಸ್ಟ್ರಕ್ಷನ್ ಕಂಪೆನಿ ಇಂಜಿನಿಯರ್ಸ್ ಹಾಗೂ ಬಿಎಂಆರ್‍ಸಿಎಲ್ ಇಂಜಿನಿಯರ್ಸ್ ಸೇರಿ 11 ಜನರ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

ತಜ್ಞರ ವರದಿಗಳು, ಪೊಲೀಸರ ತನಿಖೆ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರುಐಐಟಿರಿಪೋರ್ಟ್ ಮತ್ತು ಎಫ್‍ಎಸ್‍ಎಲ್ ರಿಪೋರ್ಟ್ ಚಾರ್ಜ್‍ಶೀಟ್‍ನಲ್ಲಿ ಅಡಕ ಮಾಡಿದ್ದಾರೆ. ಅಲ್ಲದೆ, ಅಧಿಕಾರಿಗಳ ಲೋಪ, ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಕೈಗೊಂಡ ಸುರಕ್ಷತಾ ಕ್ರಮಗಳ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ.

ಕಾಮಗಾರಿ ಯೋಜನೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೊಲೀಸರು, ಪಿಲ್ಲರ್ ಡಿಸೈನ್ ಹೇಗೆ ಮಾಡಲಾಗಿತ್ತು, ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಿತ್ತು, ಲೋಪ ಯಾರದ್ದು ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಐಐಟಿ ರಿಪೋರ್ಟ್ ಮತ್ತು ಬಳಕೆಯಾದ ಮೆಟಿರಿಯಲ್ಸ್ ಬಗ್ಗೆ ಎಫ್‍ಎಸ್ ಎಲ್ ರಿಪೋರ್ಟ್ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಈ ದುರ್ಘಟನೆ ಸಂಬಂಧ ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ನೀಡಿದ ದೂರಿನ ಅನ್ವಯ ಸೈಟ್ ಇಂಜಿನಿಯರ್ಸ್, ಗುತ್ತಿಗೆದಾರರು, ಬಿಎಂಆರ್ ಸಿಎಲ್ ಅಧಿಕಾರಿಗಳು, ಸೈಟ್ ಇನ್‍ಚಾರ್ಜ್ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News