ಜನ್ಮ ದಿನದಂದೇ ಸಂಚು ರೂಪಿಸಿ ಪುತ್ರನ ಕೊಲೆಗೈದಿರುವ ಶಂಕೆ: ತನಿಖೆ ನಡೆಸುವಂತೆ ಗೃಹ ಸಚಿವರ ನಿವಾಸಕ್ಕೆ ಅಲೆಯುತ್ತಿರುವ ಪೋಷಕರು..!
ಬೆಂಗಳೂರು, ಜೂ.24: ಆರು ತಿಂಗಳ ಹಿಂದೆ ತಮ್ಮ ಮಗನನ್ನು ಸ್ನೇಹಿತರೇ ಕರೆದೊಯ್ದ ಕೊಲೆಗೈದಿದ್ದಾರೆ. ಈ ಕುರಿತು ದಾಖಲೆಗಳೂ ಇವೆ. ಆದರೂ, ಪೊಲೀಸರು ದೂರು ಸ್ವೀಕಾರ ಮಾಡುತ್ತಿಲ್ಲ. ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಹತ್ತಾರು ಬಾರಿ ಹೋಗಿ ಬರುತ್ತಿದ್ದೇವೆ ಎಂದು ಅನುಮಾನಸ್ಪದ ಸಾವನ್ನಪ್ಪಿರುವ ರೀಗನ್(26) ಪೋಷಕರು ಅಳಲು ತೋಡಿಕೊಂಡರು.
ಇಲ್ಲಿನ ಕುವೆಂಪುನಗರ ನಿವಾಸಿ ಆಗಿದ್ದ 26 ವರ್ಷದ ರೀಗನ್, ಜ.7ರಂದು ಜನ್ಮದಿನ ಆಚರಣೆಗಾಗಿ ಸ್ನೇಹಿತರ ಜೊತೆ ರಾತ್ರಿ ವೇಳೆ ಹೊರಗಡೆ ಹೋಗಿದ್ದ. ಅಂದು ಸ್ನೇಹಿತರಲ್ಲಿ ಓರ್ವ ದಿಢೀರ್ ಮೊಬೈಲ್ ಕರೆ ಮಾಡಿ ರೀಗನ್ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದ. ಆನಂತರ, ಕುಟುಂಬ ಸದಸ್ಯರೊಂದಿಗೆ ಗಂಗಮ್ಮ ಸರ್ಕಲ್ ಬಳಿಯ ವಾಯುನೆಲೆಯ ಕಾಡಿಗೆ ತೆರಳಿ ನೋಡಿದಾಗ ಪುತ್ರನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವುದು ಸ್ಪಷ್ಟವಾಗಿ ಕಂಡಿತು.
ಈ ಸಂಬಂಧ ಪೋಟೋಗಳನ್ನು ತೆಗೆದುಕೊಂಡವು. ಇದರನ್ವಯ ಪ್ರಕರಣ ದಾಖಲಿಸಿಕೊಳ್ಳುವಂತೆ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರಿಗೆ ಮನವಿ ಮಾಡಿದರೂ, ಅವರು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಉತ್ತರಿಸಿದರು ಎಂದು ರೀಗನ್ ತಂದೆ ಆರೋಗ್ಯಸ್ವಾಮಿ ಹೇಳಿದರು.
ಇದಾದ ಬಳಿಕ ಮೂರು ದಿನಗಳ ಬಳಿಕ ಅಂದರೆ ಜ.10ರಂದು ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ, ದೂರನ್ನೆ ಸ್ವೀಕಾರ ಮಾಡಲಿಲ್ಲ. ಅಲ್ಲಿಂದ ಆರ್‍ಎಂಸಿ ಯಾರ್ಡ್‍ನಲ್ಲಿರುವ ಎಸಿಪಿ ಕಚೇರಿ, ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಕಚೇರಿಗೂ ದೂರು ಮುಟ್ಟಿಸಿದರೂ, ಸಣ್ಣ ಸಹಾಯವೂ ಮಾಡಲಿಲ್ಲ. ಆದರೂ, ಪ್ರಯತ್ನ ಬಿಡದೆ, ನಗರ ಪೊಲೀಸ್ ಆಯುಕ್ತರ ಕಚೇರಿ, ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಹೋಗಿ ಮನವಿ ಪತ್ರ ಸಲ್ಲಿಕೆ ಮಾಡಿದೇವು. ಆದರೆ, ಅಲ್ಲಿಂದಲೂ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಆರೋಗ್ಯ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ದಾಖಲೆ ಇದೆ: ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಗಣಿಸದೇ ತಮ್ಮ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಾರೆ. ಇದನ್ನು ನಂಬಲು ಅರ್ಹವೇ ಅಲ್ಲ. ಅದು ಅಲ್ಲದೆ, ಕೃತ್ಯವೆಸಗಿದ ಆರೋಪಿಗಳು ಪುತ್ರನ ಮೊಬೈಲ್ ಇಟ್ಟುಕೊಂಡಿದ್ದರು. ದೇಹದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಗಾಯಗಳಿದ್ದವು. ಇನ್ನೂ, ಅಪಘಾತವೆಂದರೆ ಅಲ್ಲಿ ಏನಾದರೂ ಜಖಂ ಆಗಿರಬೇಕಲ್ಲವೇ ಎಂದು ಆರೋಗ್ಯಸ್ವಾಮಿ ಪ್ರಶ್ನೆ ಮಾಡಿದರು.
ಇನ್ನೂ, ಈ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯೂ ಎಲ್ಲ ಆಯಾಮದಲ್ಲೂ ತನಿಖೆ ನಡೆಯಬೇಕಾಗಿದೆ. ನಮ್ಮ ಮೇಲೆ ಹಳೇ ದ್ವೇಷ ಇಟ್ಟುಕೊಂಡಿರುವ ಸ್ಥಳೀಯ ನಿವಾಸಿಗಳಾದ ಗ್ಯಾಬ್ರಿಯಲ್, ಲಿಜು, ಆರೋಗ್ಯದಾಸ್ ಎಂಬುವರನ್ನು ಒಮ್ಮೆ ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ಆರೋಗ್ಯಸ್ವಾಮಿ ಸರಕಾರಕ್ಕೆ ಆಗ್ರಹಿಸಿದರು.
ಸಿಐಡಿ ತನಿಖೆ: ಕೊಲೆಗೈದಿರುವ ಆರೋಪಿಗಳಿಗೆ ಪ್ರಭಾವಿಗಳ ಬೆಂಬಲ ಇರುವ ಶಂಕೆ ಇದೆ. ಹೀಗಾಗಿ, ಇಂತಹ ಗಂಭೀರ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಳಪಡಿಸಬೇಕು. ಜೊತೆಗೆ, ಇಷ್ಟೊಂದು ದಿನ ಕಳೆದರೂ ಯಾವುದೇ ತನಿಖೆ, ಕ್ರಮ ಕೈಗೊಳ್ಳದ ಸ್ಥಳೀಯ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ದಿನಗೂಲಿ ಬಿಟ್ಟು ಸಚಿವರ ಮನೆಗೆ ಬಂದೆ: ‘ಇರುವ ಇಬ್ಬರು ಪುತ್ರರ ಪೈಕಿ ರೇಗನ್ ಎರಡನೇ ಪುತ್ರ. ನಾನು ಮನೆ ನಿರ್ಮಾಣ ಮಾಡುವ ಮೆಸ್ತ್ರೀ ಕೆಲಸದಲ್ಲಿ ತೊಡಗಿದ್ದೇನೆ.ದಿನಗೂಲಿಬಿಟ್ಟು ಮಗನ ಸಾವಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಲು ಅವರನಿವಾಸಕ್ಕೆ ತೆರಳಿ ಎರಡು, ಮೂರು ಬಾರಿ ಮನವಿ ಪತ್ರ ಸಲ್ಲಿಸಿದ್ದೇನೆ’ ಎಂದು ಆರೋಗ್ಯ ಸ್ವಾಮಿ ಅಳಲು ತೋಡಿಕೊಂಡರು.
ಸೂಕ್ತ ತನಿಖೆ ನಡೆಸದಿದ್ದರೆ ಹೋರಾಟ: ‘ರಾಜ್ಯ ಸರಕಾರ ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಮುಂದಾಗಬೇಕು. ಈಗಾಗಲೇ ದಲಿತರ ಹತ್ಯೆಗಳು ನಡೆದಿವೆ.ಇದರ ತನಿಖೆ ಚುರುಕುಗೊಳಿಸಬೇಕು. ಇನ್ನೂ, ರೀಗನ್ ಎಂಬ ಯುವಕನನ್ನು ಕೊಲೆಗೈದಿರುವ ಶಂಕೆಯಿದ್ದು, ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಹೋರಾಟ ನಡೆಸಲಾಗುವುದು’
-ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ರಾಜ್ಯಾಧ್ಯಕ್ಷ