ನರೇಗಾ ಯೋಜನೆಯಡಿ ಮೇ ತಿಂಗಳಲ್ಲಿ ಬೀದರ್ ಜಿಲ್ಲೆಯ 1 ಲಕ್ಷ ಕೂಲಿಕಾರರಿಗೆ ಕೆಲಸ : ಡಾ.ಗಿರೀಶ್ ಬದೋಲೆ

ಬೀದರ್ : ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಎಪ್ರಿಲ್, ಮೇ ಮತ್ತು ಜೂನ್ ತಿಂಗಳು ಕೂಲಿಕಾರರು ಕೆಲಸ ನಿರೀಕ್ಷಿಸುವ ತಿಂಗಳುಗಳಾಗಿವೆ. ಹೀಗಾಗಿ ಮೇ ತಿಂಗಳಲ್ಲಿ ಜಿಲ್ಲೆಯ ಎಂಟು ತಾಲ್ಲೂಕು ಸೇರಿ 1 ಲಕ್ಷ ಜನ ಕೂಲಿಕಾರರಿಗೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಹೇಳಿದ್ದಾರೆ.
ಇಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕ, ಟಿಸಿ, ಟಿಐಎಂಎಸ್, ಟಿಐಇಸಿಗಳ ಜೊತೆಗೆ ವಿಡಿಯೋ ಸಂವಾದದ ಮೂಲಕ ಸಭೆ ಜರುಗಿಸಿ ಅವರು ಮಾತನಾಡಿದರು.
ರೈತಾಪಿ ವರ್ಗದ ಅತಿಸಣ್ಣ ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಬೇಸಿಗೆ ಕಾಲದಲ್ಲಿ ಬೇರೆಡೆ ಕೆಲಸ ಸಿಗುವುದಿಲ್ಲ. ಆದ್ದರಿಂದ ಅವರು ಮನೆಯಲ್ಲಿ ಖಾಲಿ ಕುಳಿತುಕೊಳ್ಳುವಂತೆ ಆಗಬಾರದು. ತಾಲ್ಲೂಕು ಐಇಸಿ ತಂಡದವರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಯವರು ಮನೆ ಮನೆಗೆ ಭೇಟಿ ನೀಡಿ ಕೂಲಿಕಾರರನ್ನು ಕೆಲಸಕ್ಕೆ ಆಹ್ವಾನಿಸಬೇಕು. ಪ್ರತಿ ಗುರುವಾರ ಗ್ರಾಮ ಪಂಚಾಯತ್‌ಗಳಲ್ಲಿ ರೋಜಗಾರ ದಿನಾಚರಣೆ ಮಾಡಿ ಕೂಲಿಕಾರರಿಗೆ ಅವರವರ ಗ್ರಾಮಗಳಲ್ಲಿಯೇ ಕೆಲಸ ನೀಡುವಂತೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಹೊಸ ಉದ್ಯೋಗಗಳ ಚೀಟಿಗಳು ನೀಡಬೇಕು. ಕೂಲಿ ಕೆಲಸಕ್ಕೆ ಅರ್ಹರಿರುವ ಎಲ್ಲಾ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಬೇಕು. ಮೇ ತಿಂಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ 1 ಸಾವಿರ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಸಹಾಯಕ ಕಾರ್ಯದರ್ಶಿ ಬೀರೇಂದ್ರ ಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ್ ಚೌವ್ಹಾಣ, ಗ್ರಾಮೀಣ ಕುಡಿಯುವ ನೀರು ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು ರಾಮಲಿಂಗ್ ಬಿರಾದಾರ್, ಶಿವಾಜಿ ಡೋಣಿ, ಎಡಿಪಿಸಿ ದೀಪಕ್, ಹಣಮಂತ್ ಚಿದ್ರಿ, ಡಿಐಎಂಎಸ್ ಕೋಮಲಾ ಹಾಗೂ ಡಿಐಇಸಿ ರಜನಿಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.