ಬೀದರ್ | ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ 3 ಹಂತದಲ್ಲಿ ಕುಟುಂಬಗಳ ಸಮೀಕ್ಷೆಗೆ ತೀರ್ಮಾನ : ಎಚ್.ಎಸ್.ಸಿಂಧು

Update: 2025-04-28 19:25 IST
ಬೀದರ್ | ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ 3 ಹಂತದಲ್ಲಿ ಕುಟುಂಬಗಳ ಸಮೀಕ್ಷೆಗೆ ತೀರ್ಮಾನ : ಎಚ್.ಎಸ್.ಸಿಂಧು
  • whatsapp icon

ಬೀದರ್ : ಡಾ.ಹೆಚ್.ಎನ್.ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಹಂತದ ಮನೆ ಮನೆ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ನೇತೃತ್ವದಲ್ಲಿ ಮೇ 5 ರಿಂದ 17 ರವರೆಗೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ನೀಡಬೇಕಾಗಿರುವ ಮಾಹಿತಿಗಳ ವಿವರ :

ಮೇ 5 ರಿಂದ 17 ರವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವುದು, ಗಣತಿದಾರರು ಪರಿಶಿಷ್ಟ ಜಾತಿ ಅವರ ಉಪ ಜಾತಿ ಮತ್ತು ಇತರೆ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಸಮೀಕ್ಷಾ ಕಾರ್ಯದ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸಲು ಜಿಲ್ಲೆಯ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗುವುದು. ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ, ಕರ್ನಾಟಕದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಸಮುದಾಯದವರು ಉಪಜಾತಿಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದರೆ ಅಂಥವರು ಅದರ ಜೊತೆಗೆ ತಮ್ಮ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸ್ಪಷ್ಟ ಸಮೀಕ್ಷಾ ವರದಿಗೆ ಪರಿಶಿಷ್ಟ ಜಾತಿ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯ ಮುಂತಾದ ಸಾಮಾನ್ಯ ಮಾಹಿತಿ, ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿಯ ಒಡೆತನ, ಮನೆ, ಆದಾಯ, ಮಾನವ ಅಬಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು.

2ನೇ ಹಂತದಲ್ಲಿ ನೀಡಬೇಕಾಗಿರುವ ಮಾಹಿತಿಗಳ ವಿವರ :

ಮೇ 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗುತ್ತದೆ. ಈ ಹಂತದ ಸಮೀಕ್ಷೆಯಲ್ಲಿ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ಏರ್ಪಡಿಸಲಾಗುವ ವಿಶೇಷ ಶಿಬಿರಗಳಿಗೆ ಪರಿಶಿಷ್ಟ ಜಾತಿಯವರು ತೆರಳಿ, ಗಣತಿದಾರರಿಗೆ ಜಾತಿ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಬೇಕು.

3ನೇ ಹಂತದಲ್ಲಿ ನೀಡಬೇಕಾಗಿರುವ ಮಾಹಿತಿಗಳ ವಿವರ :

ಮೇ 19 ರಿಂದ 21 ರವರೆಗೆ ಮೇಲಿನ ಎರಡು ಹಂತಗಳಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಬಾಕಿ ಉಳಿದವರು 3ನೇ ಹಂತದಲ್ಲಿ ಸ್ವಯಂ ಘೋಷಣೆ ಮೂಲಕ ಮೇ 19 ರಿಂದ 23 ರವರೆಗೆ ಆನ್‌ಲೈನ್ ಮೂಲಕ ಸಮೀಕ್ಷೆಗೆ ಮಾಹಿತಿ ಒದಗಿಸಬಹುದು. ಇದಕ್ಕಾಗಿ ಅವರು ಆಧಾರ್ ಸಂಖ್ಯೆ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News