ಬೀದರ್ | ಖುರೇಶಿ ಸಮುದಾಯದ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯಗೆ ಮನವಿ

ನಬಿ ಖುರೇಶಿ
ಬೀದರ್ : ಖುರೇಶಿ ಸಮುದಾಯದ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ಖುರೇಶ್ ಕಾನ್ಫರೆನ್ಸ್ ರಾಜ್ಯ ಅಧ್ಯಕ್ಷ ಅಬ್ದುಲ್ ನಬಿ ಖುರೇಶಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ನಗರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರಾಜ್ಯದಲ್ಲಿ ಖುರೇಶಿ ಸಮುದಾಯ ಒಟ್ಟು 16 ಲಕ್ಷ ಜನಸಂಖ್ಯೆ ಹೊಂದಿದ್ದು, ಪ್ರಾಣಿ ವ್ಯಾಪಾರ ಹಾಗೂ ಮಾಂಸ ವ್ಯಾಪಾರದ ಮೂಲಕ ಜೀವನ ನಿರ್ವಹಣೆ ಮಾಡುತ್ತಿದೆ. ಹಿಂದಿನ ಸರ್ಕಾರ ಕಸಾಯಿಖಾನೆಗಳನ್ನು ಮುಚ್ಚಿ ಹೊಸ ಕಾನೂನು ಜಾರಿಗೊಳಿಸಿದ್ದರಿಂದ ಈ ಸಮುದಾಯದ ವ್ಯವಹಾರ ಸಂಪೂರ್ಣವಾಗಿ ನಿಂತು ಹೋಗುವ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಚ್ಚಲಾದ ಕಸಾಯಿಖಾನೆಗಳನ್ನು ಆಧುನಿಕರಿಸಿ, ಪುನರ್ ಆರಂಭಿಸಬೇಕು. ರಾಜ್ಯವು ಮಾಂಸ ಮಂಡಳಿ ರಚಿಸಿ, ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ಕರ್ನಾಟಕ ಗೋಮಾಂಸ ನಿಷೇಧ ಕಾನೂನು 2021 ಅನ್ನು ಹಿಂಪಡೆದು, 1964 ರ ಹಳೆ ಕಾನೂನು ಮರು ಜಾರಿಗೊಳಿಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗೋಶಾಲೆ ಹಾಗೂ ಗೋ ರಕ್ಷಣೆಯ ಹೆಸರಲ್ಲಿ ದನದ ವ್ಯಾಪಾರಿಗಳ ವಾಹನಗಳನ್ನು ತಡೆದು, ಗುಂಪು ದರೋಡೆ ಮಾಡುವ ಸರ್ಕಾರೇತರ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಖುರೇಶಿ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.