ಬೀದರ್ | ಆಟೋ ರಿಕ್ಷಾ ಪಲ್ಟಿ: ಓರ್ವ ಪ್ರಯಾಣಿಕ ಮೃತ್ಯು
Update: 2025-02-21 09:35 IST

ಬೀದರ್: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಚಿಕ್ಕಪೇಟ್ ಮತ್ತು ಮರಕಲ್ ಗ್ರಾಮಗಳ ನಡುವೆ ಗುರುವಾರ ಸಂಭವಿಸಿದೆ.
ಔರಾದ್ ತಾಲೂಕಿನ ಬಲ್ಲೂರ್ (ಜೆ) ಗ್ರಾಮದ ನಿವಾಸಿ ರಾಜಕುಮಾರ್ ಗುಂಡಪ್ಪ ಉದಗಿರೆ (55) ಮೃತಪಟ್ಟ ವ್ಯಕ್ತಿ.
ಆರು ಮಂದಿ ಪ್ರಯಾಣಿಕರಿದ್ದ ಆಟೋ ಬಲ್ಲೂರ್ (ಜೆ) ಗ್ರಾಮದಿಂದ ಬೀದರ್ ಕಡೆಗೆ ಹೊರಟಿತ್ತು. ರಸ್ತೆಮಧ್ಯೆ ಆಟೋ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಆಟೊ ಪಲ್ಟಿಯಾಗಿದೆ. ಪರಿಣಾಮವಾಗಿ ರಾಜಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.