ಬೀದರ್ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಬೀದರ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾಲ್ಕಿಯ ಪೌರಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಪುರಸಭೆ ಕಾರ್ಯಾಲಯದ ಎದುರುಗಡೆ ಇಂದು ಪ್ರತಿಭಟನೆ ನಡೆಸಿದರು.
ಪೌರ ಸೇವಾ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ನೀಡುವ ಸೌಲಭ್ಯ ನಮಗೂ ನೀಡಬೇಕು. ಪುರಸಭೆ ಸಿಬ್ಬಂದಿ ಹಾಗೂ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರನ್ನು ನೌಕರರೆಂದು ಪರಿಗಣಿಸಿ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ವಿಚಾರದಲ್ಲಿ ಸರಕಾರ ಮೌನ ವಹಿಸುವ ಮೂಲಕ ಪೌರಕಾರ್ಮಿಕರನ್ನು ಕಡೆಗಣಿಸಿದೆ. ಹಲವು ಬಾರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ. ಸರಕಾರ ಈಗ ನೀಡುತ್ತಿರುವ ವೇತನ, ಸೌಲಭ್ಯ ಸಾಕಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಚಿತ್ರದುರ್ಗದಲ್ಲಿ ನಡೆದ ರಾಜ್ಯ ಪೌರ ನೌಕರರ ಸಂಘದ ಸಭೆಯಲ್ಲಿ ನಿರ್ಣಯಿಸಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಈಗಾಗಲೇ ಸರಕಾರಕ್ಕೆ ಗಡುವು ನೀಡಲಾಗಿದೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅವಿನಾಶ್ ಗಾಯಕವಾಡ್, ಉಪಾಧ್ಯಕ್ಷ ವಿಶ್ವನಾಥ್ ಸದಾನಂಗ್ಲೇ, ಕಾರ್ಯದರ್ಶಿ ವಿಜಯಕುಮಾರ್ ಬನ್ಸೊಡೆ, ಖಜಾಂಜಿ ಸಂತೋಷ್ ಪಾಂಚಾಳ್, ಧನಾಜಿ ಸೂರ್ಯವಂಶಿ, ಸಂತೋಷ್ ದೋಡಕೆ ಹಾಗೂ ಹೊರಗುತ್ತಿಗೆ ನೌಕರರ ಸಿಬ್ಬಂದಿ ಇದ್ದರು.