ಬೀದರ್ | ಭ್ರಷ್ಟಾಚಾರದ ಆರೋಪ |ಭಾಲ್ಕಿ ಸಿಡಿಪಿಓ ಅವರ ಅಮಾನತಿಗಾಗಿ ಒತ್ತಾಯ

Update: 2025-04-09 15:33 IST
Photo of Letter of appeal
  • whatsapp icon

ಬೀದರ್ : 2024-25ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಅವ್ಯವಹಾರ ಎಸಗಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಭಾಲ್ಕಿಯ ಸಿಡಿಪಿಒ ಅವರನ್ನು ತಕ್ಷಣವೇ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆಯು ಆರೋಪಿಸಿದೆ.

ಇಂದು ಭಾಲ್ಕಿಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಾಗಿ ಆನ್ ಲೈನ್ ಅರ್ಜಿ ಅಹ್ವಾನಿಸಲಾಗಿತ್ತು. ಇದರಂತೆಯೇ ಸೂಕ್ತ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಆ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ, ಮಾರ್ಚ್ ತಿಂಗಳಲ್ಲಿ ಜಿಲ್ಲಾ ಆಯ್ಕೆ ಸಮಿತಿಯಿಂದ ಮರು ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಮಾರ್ಚ್ ತಿಂಗಳಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿದ ಜಿಲ್ಲಾ ಸಮಿತಿಯಲ್ಲಿ ಭಾಲ್ಕಿಯ ಸಿಡಿಪಿಒ ಅವರು ಕೂಡ ತಾಲ್ಲೂಕು ಸದಸ್ಯ ಕಾರ್ಯದರ್ಶಿಯಾಗಿದ್ದು, ತಮಗೆ ಬೇಕಾದವರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಣ ಪಡೆದು ಅನರ್ಹರಿಗೂ ಕೂಡ ನೇಮಕ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಇದರಿಂದಾಗಿ ಅವರು ಸಂಪೂರ್ಣವಾಗಿ ಸರ್ಕಾರದ ನಿಯಮ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಲಾಗಿದೆ.

ಮೊದಲ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಕೈಬಿಟ್ಟು, ಮರುತಾತ್ಕಾಲಿಕ ಪಟ್ಟಿಯಲ್ಲಿ ಹಣ ನೀಡಿದವರನ್ನು ಆಯ್ಕೆ ಮಾಡಲಾಗಿದೆ. ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಬಿಟ್ಟು ಕಡಿಮೆ ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಇಂತಹ ಹಲವಾರು ಲೋಪದೋಷಗಳಿದ್ದು, ಇವರು ಸಂಪೂರ್ಣವಾಗಿ ಸರ್ಕಾರದ ನಿಯಮಗಳು ಗಾಳಿಗೆ ತೂರಿದ್ದಾರೆ ಎಂದು ದೂರಲಾಗಿದೆ.

ಈ ಸಂದರ್ಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಮೋರೆ, ಅಧ್ಯಕ್ಷ ಕೈಲಾಸ್ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ಮಾರುತಿ ಭಾವಿಕಟ್ಟಿ, ವಿನಾಯಕ ಫುಲೆ, ಪ್ರಕಾಶ್ ಭಾವಿಕಟ್ಟಿ, ರಾಜಕುಮಾರ್ ಉಜ್ವಲೆ, ಸುರೇಶ್ ಸುತ್ತಾರ್, ಬುದ್ಧಾನಂದ್ ಸಿಂಧೆ, ಪಾಂಡುರಂಗ್ ಹಾಗೂ ಗೌತಮ್ ಫುಲೆ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News