ಬೀದರ್ | ಎ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಎ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ಬೆಳಿಗ್ಗೆ 9 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ಪೂಜೆ ಹಾಗೂ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿ, ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೆರವಣಿಗೆಯು ನಗರದ ಭಗತಸಿಂಗ್ ವೃತ್ತ, ಬಸವೇಶ್ವರ್ ವೃತ್ತ, ನಯಾ ಕಮಾನ್, ಚೌಬಾರಾ, ಗವಾನ್ ಚೌಕ್ ಮಾರ್ಗದ ಮೂಲಕ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮುಕ್ತಾಯಗೊಳಿಸಲಾಗುವುದು. ಸಾಯಂಕಾಲ 5 ಗಂಟೆಗೆ ಶಿವಾಜಿ ವೃತ್ತದ ಹತ್ತಿರದಲ್ಲಿ ಜಿಲ್ಲಾಡಳಿತ ವತಿಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ನೀಡಲಾಗುವುದು ಎಂದು ಹೇಳಿದ್ದಾರೆ.
ವಿವಿಧ ಗ್ರಾಮಗಳಿಂದ ಆಗಮಿಸುವ ಸಾರ್ವಜನಿಕರಿಗೆ ಬಸ್ಸುಗಳ ವ್ಯವಸ್ಥೆ ಹಾಗೂ ಮೆರವಣಿಗೆ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಸ್ವಚ್ಚತೆ ಕಾಪಾಡುವಂತೆ ನಗರಸಭೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಆರೋಗ್ಯ ಇಲಾಖೆಯಿಂದ ಮೆರವಣಿಗೆಯಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದ ಅವರು, ವಿವಿಧ ಇಲಾಖೆಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಕಾಲದಲ್ಲಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ , ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ಎಚ್.ಎಸ್, ಸಮಾಜದ ಮುಖಂಡರಾದ ಮಾರುತಿ ಬೌದ್ಧೆ, ಸುಧಾಕರ್ ಏಕಂಬೇಕರ್, ರಾಜಶೇಖರ್ ಬನಾಳೆ, ಸಂತೋಷ್ ಜೊಳದಪಕೆ, ವಿನೋದ್ ಬಂದಗೆ, ಅಭಿ ಕಾಳೆ, ಬಾಬುರಾವ್ ಮುಲಕಾಪೂರೆ ಮತ್ತು ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ ಸೇರಿದಂತೆ ಸಮಾಜದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.