ಬೀದರ್ | ಎ.26 ರಂದು ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಯೋಜನೆ : ಬಸವರಾಜ್ ಮಾಳಗೆ

ಬೀದರ್ : ಎ.26 ರಂದು ನಗರದ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಡಾ.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವಕ್ತಾರ ಬಸವರಾಜ್ ಮಾಳಗೆ ಅವರು ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಹಿಂದುಳಿದ ವರ್ಗದವರಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಗೌರವಿಸುವ ಸದುದ್ದೇಶದಿಂದ ಈ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಡಾ.ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಸೀಮಿತರಲ್ಲ. ಅವರು ಬಡವರಿಗೆ, ದೀನ ದಲಿತರಿಗೆ, ಕಾರ್ಮಿಕರಿಗೆ, ಹಿಂದುಳಿದ ಸೇರಿದಂತೆ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಅವರು ನ್ಯಾಯವನ್ನು ಒದಗಿಸಿ ವ್ಯಕ್ತಿಯಾಗಿದ್ದಾರೆ. ಅವರು ನೀಡಿದ ಕೊಡುಗೆ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಯಾಗಿ ಪೌರಾಡಳಿ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಲೋಕಸಭಾ ಸದಸ್ಯ ಸಾಗರ್ ಖಂಡ್ರೆ ಭಾಗವಹಿಸಲಿದ್ದು, ವಿಜಯಲಕ್ಷ್ಮಿ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡುವವರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಸುಭಾಷ್ ಹಮೀಲಾಪುರ್, ಗೋವರ್ಧನ್ ರಾಥೋಡ್, ಬಾಬುರಾವ್ ಕುಂಬಾರ್, ಶಂಕರರಾವ್ ಬಿರಾದಾರ್ ಹಾಗೂ ತಾನಾಜಿ ಸಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.