ಬೀದರ್ | ಕರ್ನಾಟಕದಲ್ಲಿ ಕನ್ನಡ ಬೆಳೆಯಲು ಮೂಲ ಕಾರಣ ಡಾ.ರಾಜ್‌ಕುಮಾರ್ : ಬಿ.ಜೆ.ವಿಷ್ಣುಕಾಂತ್

Update: 2025-04-24 17:41 IST
ಬೀದರ್ | ಕರ್ನಾಟಕದಲ್ಲಿ ಕನ್ನಡ ಬೆಳೆಯಲು ಮೂಲ ಕಾರಣ ಡಾ.ರಾಜ್‌ಕುಮಾರ್ : ಬಿ.ಜೆ.ವಿಷ್ಣುಕಾಂತ್
  • whatsapp icon

ಬೀದರ್ : 1982 ಕ್ಕಿಂತ ಮೊದಲು ಕರ್ನಾಟಕದಲ್ಲಿ ಹೆಚ್ಚಾಗಿ ಸಂಸ್ಕೃತ ಭಾಷೆ ಚಾಲ್ತಿಯಲ್ಲಿತ್ತು. ನಂತರ ಡಾ.ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಿಂದ ಕರ್ನಾಟಕದಲ್ಲಿ ಕನ್ನಡ ಬೆಳೆಯಿತು ಎಂದು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಜೆ.ವಿಷ್ಣುಕಾಂತ್ ಅವರು ಹೇಳಿದರು.

ಇಂದು ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಡೆದ ಡಾ.ರಾಜ್‌ಕುಮಾರ್ ಅವರ 97ನೇ ಜಯಂತಿ ಅಂಗವಾಗಿ ನಡೆದ ರಾಜರಸ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೊದ ಮೊದಲಿಗೆ ರಾಜ್ಯದ ಎಲ್ಲ ಸಾಹಿತಿಗಳು ಒಗ್ಗೂಡಿ ಕನ್ನಡದ ಬಗ್ಗೆ ಹೋರಾಟ ನಡೆಸಿದರು. ಆ ಹೋರಾಟಕ್ಕೆ ಜಯ ಸಿಗಲಿಲ್ಲ. ಆ ಎಲ್ಲ ಸಾಹಿತಿಗಳು ಒಗ್ಗೂಡಿ ಗೋಕಾಕ್ ಚಳುವಳಿಯ ನಾಯಕತ್ವವನ್ನು ಡಾ.ರಾಜ್‌ಕುಮಾರ್ ಅವರಿಗೆ ವಹಿಸಲು ಕೋರಿದರು. ಇದನ್ನು ಒಪ್ಪಿದ ಡಾ.ರಾಜ್‌ಕುಮಾರ್‌ ಅವರು ಒಂದು ತಿಂಗಳ ಕಾಲ ಚಳುವಳಿ ನಡೆಸಿದರು. ಕೊನೆಗೆ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರಿಗೆ ವರದಿ ಸಲ್ಲಿಸಿದಾಗ, ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಯಿತು. ಕನ್ನಡವನ್ನು ಪ್ರಥಮ ಭಾಷೆಯಾಗಿ ಘೋಷಣೆ ಮಾಡಲಾಯಿತು. ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಬೆಳೆಯಿತು ಎಂದರು.

ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಅವರು ಮಾತನಾಡಿ, ಕನ್ನಡ ಚಿತ್ರರಂಗವನ್ನು ಕನ್ನಡಕ್ಕೆ ಪರಿಚಯಿಸಿದವರು ಡಾ.ರಾಜ್‌ಕುಮಾರ್ ಅವರಾಗಿದ್ದಾರೆ. ಅವರು ಒಬ್ಬ ನಟರಾಗದೆ ಒಳ್ಳೆ ಸಮಾಜದ ಹರಿಕಾರರಾಗಿದ್ದಾರೆ. ನಾನು ಕೂಡ ಅವರ ಅಭಿಮಾನಿಯಾಗಿದ್ದೇನೆ. ವಿದ್ಯಾರ್ಥಿಗಳು ಅವರ ಚಲನಚಿತ್ರಗಳು ನೋಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆ.ಆರ್.ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ ಶೇಟಕಾರ್ ಅವರು ಮಾತನಾಡಿ, ಡಾ.ರಾಜ್‌ಕುಮಾರ್ ಅವರು ವೀರಪ್ಪನ್ ಜತೆಗೂ ಕೂಡ ಕಾಲ ಕಳೆದಿದ್ದರು ಆದರೂ ಧೃತಿಗೆಡದೇ ಪ್ರೀತಿಯಿಂದಲೇ ಅವರ ಮನಸ್ಸನ್ನು ಗೆದ್ದಿದ್ದರು. ಇವರು ಸಾಮಾನ್ಯ ವ್ಯಕ್ತಿ ಇರಲಿಲ್ಲ ಎಂದು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಜನಪದ ಆಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನರೇಶ್, ಸತೀಶ್ ಪಾಟೀಲ್, ಚಂದ್ರಕಾಂತ್ ಶೇಟಕಾರ್, ಮಲ್ಲಿಕಾರ್ಜುನ್ ಹಂಗರಗಿ, ಸೋಮನಾಥ್ ಬಿರಾದಾರ್, ಮಲ್ಲಯ್ಯ ಸ್ವಾಮಿ ಹಾಗೂ ಸಂಗೀತಾ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News