ಬೀದರ್ | ಸಾಲದ ಹಣ ವಸೂಲಿಗೆ ಬಂದ ಸಿಬ್ಬಂದಿಯಿಂದ ರೈತನ ಮೇಲೆ ಹಲ್ಲೆ ಆರೋಪ : ಪ್ರಕರಣ ದಾಖಲು
Update: 2025-04-18 16:42 IST

ಬೀದರ್ : ಸಾಲದ ಹಣ ವಸೂಲಿಗೆ ಬಂದ ಖಾಸಗಿ ಬ್ಯಾಂಕ್ ಸಿಬ್ಬಂದಿ ರೈತನ ಮೇಲೆ ಹಲ್ಲೆ ನಡೆಸಿದ ಆರೋಪ ಭಾಲ್ಕಿ ತಾಲ್ಲೂಕಿನ ಕೇಸರ ಜವಳಗಾ ಗ್ರಾಮದಲ್ಲಿ ನಡೆದಿದೆ.
ರಾಜಕುಮಾರ್ ಮಟ್ಟೆ ಹಲ್ಲೆಗೊಳಗಾದ ರೈತ ಎಂದು ಗುರುತಿಸಲಾಗಿದೆ.
ರಾಜಕುಮಾರ್ ಅವರ ಪತ್ನಿ ಭಾಲ್ಕಿಯ ಸಿದ್ಧಶ್ರೀ ಎಂಬ ಖಾಸಗಿ ಬ್ಯಾಂಕಿನಲ್ಲಿ 39 ಸಾವಿರ ರೂ. ಸಾಲ ಪಡೆದಿದ್ದರು. ಪ್ರತಿವಾರ ಕಂತಿನ ರೂಪದಲ್ಲಿ ಸಾಲ ಕಟ್ಟಿದ ಇವರು, ಇನ್ನು 2-3 ಕಂತಿನ ಸಾಲ ಮಾತ್ರ ಕಟ್ಟುವುದು ಬಾಕಿ ಇತ್ತು. ಆದರೆ ಈ ಉಳಿದ ಸಾಲವನ್ನು ಸೂಕ್ತ ಸಮಯದಲ್ಲಿ ಪಾವತಿಸಲಿಲ್ಲ ಎನ್ನುವ ಕಾರಣದಿಂದ ಬ್ಯಾಂಕ್ ಸಿಬ್ಬಂದಿಗಳು ರೈತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ರೈತನಿಗೆ ಹುಲಸೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.