ಬೀದರ್ | ಬೆಂಕಿ ಅವಘಡ : ಲಕ್ಷಾಂತರ ಮೌಲ್ಯದ ಈರುಳ್ಳಿ ನಾಶ
Update: 2025-04-24 17:55 IST

ಬೀದರ್ : ಬೆಂಕಿ ಅವಘಡದಿಂದ ರಾಶಿಮಾಡಿಟ್ಟಿದ್ದ ಈರುಳ್ಳಿಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಈರುಳ್ಳಿ ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ ಇಮಾಮಬಾದ್ ಹಳ್ಳಿಯಲ್ಲಿ ನಡೆದಿದೆ.
ಚಂದ್ರಪ್ಪ ವಡ್ಡಿ ಎನ್ನುವವರಿಗೆ ಈ ಈರುಳ್ಳಿ ಸೇರಿದೆ. ಇವರು 2 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇತ್ತೀಚಿಗೆ ತಾವು ಬೆಳೆದ ಈರುಳ್ಳಿಯನ್ನು ರಾಶಿ ಮಾಡಿ ಒಂದು ಕಡೆ ಜಮೆ ಮಾಡಿಟ್ಟಿದ್ದರು. ಆದರೆ ಬುಧವಾರ ರಾತ್ರಿ ಆ ಈರುಳ್ಳಿಗೆ ಬೆಂಕಿ ಬಿದ್ದಿದ್ದು, ಸುಟ್ಟು ನಾಶವಾಗಿದೆ.
ಸುಮಾರು 200 ಕ್ವಿಂಟಲ್ ಎಂದರೆ ಅಂದಾಜು 4 ಲಕ್ಷ ರೂ. ಮೌಲ್ಯದ ಈರುಳ್ಳಿ ಬೆಳೆದಿದ್ದರು. ಬೆಂಕಿಯಿಂದ ಹೊಲದಲ್ಲಿರುವ ನೀರಿನ ಪೈಪು ಹಾಗೂ ಗಿಡಗಳು ಸುಟ್ಟು ಹೋಗಿವೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಚಂದ್ರಪ್ಪ ವಡ್ಡಿ ಅವರ ಸಂಬಂಧಿ ಶಿವಶಂಕರ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ನೌಬಾದ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.