ಬೀದರ್ | ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ : ಇತರ ಅಧಿಕಾರಿಗಳನ್ನು ವಜಾ ಮಾಡಲು ಭೀಮ್ ಆರ್ಮಿ ಆಗ್ರಹ

Update: 2025-04-21 17:52 IST
Photo of Letter of appeal
  • whatsapp icon

ಬೀದರ್ : ಎ.15 ರ ರಾತ್ರಿ ಪತ್ರಕರ್ತ ರವಿ ಅವರ ಮೇಲೆ ಅರಣ್ಯ ಅಧಿಕಾರಿಗಳು ಹಲ್ಲೆ ನಡೆಸಿದ ಪ್ರಕರಣದಲ್ಲಿ ಒಬ್ಬರು ಅಧಿಕಾರಿಗಳಿಗೆ ಮಾತ್ರ ವಜಾಗೊಳಿಸಲಾಗಿದೆ. ಇನ್ನಿತರ ಅಧಿಕಾರಿಗಳನ್ನು ಕೂಡ ಸೇವೆಯಿಂದ ವಜಾಗೊಳಿಸಬೇಕು ಎಂದು ಭೀಮ್ ಆರ್ಮಿ ಸಂಘಟನೆ ಆಗ್ರಹಿಸಿದೆ.

ಇಂದು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ ಸಲ್ಲಿಸಿದ ಮನವಿ ಪತ್ರದಲ್ಲಿ, ಘಟನೆಯಲ್ಲಿ 7 ರಿಂದ 8 ಜನ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದಾರೆ. ಆದರೆ ಒಬ್ಬ ಅರಣ್ಯ ಅಧಿಕಾರಿಯನ್ನು ಅಮಾನತುಗೊಳಿಸಿದ್ದು, ಇನ್ನುಳಿದವರ ಮೇಲೆ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯವಾಗಿದೆ. ಈ ಎಲ್ಲ ಅಧಿಕಾರಿ, ಸಿಬ್ಬಂದಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಹಾಗೆಯೇ ಈ ಎಲ್ಲರ ಮೇಲೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಕರಣದ ಸತ್ಯಾಂಶ ಗೊತ್ತಿದ್ದರೂ ಕೂಡ ಪತ್ರಕರ್ತ ರವಿ ಭೂಸಂಡೆ ಮತ್ತು ವಿಶ್ವನಾಥ್ ಗಾಯಕವಾಡ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಕೌಂಟರ್ ಕೇಸ್ ಗೆ ಬಿ-ರಿಪೋರ್ಟ್ ಹಾಕಿ ಇವರ ಮೇಲಿರುವ ಪ್ರಕರಣ ರದ್ದುಗೊಳಿಸಬೇಕು. ಅದಲ್ಲದೇ ರವಿ ಅವರ ಮೊಬೈಲ್ ಒಂದನ್ನು ಒಡೆದು ಹಾಕಿ ಆರ್ಥಿಕ ಹಾನಿ ಉಂಟು ಮಾಡಲಾಗಿದ್ದು, ಅವರಿಗೆ ಆರ್ಥಿಕ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಅಂಬರೀಶ್ ಕುದರೆ, ಗೌರವ ಅಧ್ಯಕ್ಷ ಘಾಳೆಪ್ಪಾ ಲಾಧಾಕರ್, ರಾಜ್ಯ ಸಮಿತಿ ಸದಸ್ಯ ಆಕಾಶ್, ಹರ್ಷಿತ್ ದಾಂಡೇಕರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ, ಅಖಿಲ್ ಸಾಗರ್, ಶ್ರೀಕಾಂತ್ ಭವಾನಿ, ಕರ್ನಾಟಕ ಭೀಮಸೇನಾ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲ್ದೊಡ್ಡಿ, ಮಾರುತಿ ಕಂಟೆ, ವಿನೀತ್ ಗಿರಿ, ರಾಹುಲ್ ಖಂದಾರೆ ಹಾಗೂ ಅಂಬದಾಸ್ ಚಕ್ರವರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News