ಬೀದರ್ | ಜಿಲ್ಲೆಯಲ್ಲಿ45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು

ಬೀದರ್ : ರಾಜ್ಯದಲ್ಲಿಯೇ ಗರಿಷ್ಠ ತಾಪಮಾನ ಬೀದರ್ ಜಿಲ್ಲೆಯಲ್ಲಿ ದಾಖಲಾಗಿದ್ದು, ಸುಮಾರು 45 ಡಿಗ್ರಿ ಸೇಲ್ಸಿಯಸ್ ತಾಪಮಾನ ಕಂಡು ಬಂದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಬಸವರಾಜ್ ಬಿರಾದಾರ್ ಅವರು ತಿಳಿಸಿದ್ದಾರೆ.
ಬುಧವಾರ ಮತ್ತು ಗುರುವಾರದಂದು ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ. ನಂತರ ಕಲಬುರಗಿ, ರಾಯಚೂರು ಜಿಲ್ಲೆಯಲ್ಲೂ ಕೂಡ ಬಿಸಿಲಿನ ತಾಪ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮೇ 10ರ ತಾರೀಕಿನವರೆಗೆ ಅತೀ ಹೆಚ್ಚು ಬಿಸಿಲು ಇರಲಿದ್ದು, ಸಾರ್ವಜನಿಕರು ತುಂಬಾ ಕಾಳಜಿ ವಹಿಸಬೇಕಾಗಿದೆ. ಜನರು ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ಹೊರಗಡೆ ತಿರುಗಾಡದೆ ಇದ್ದರೆ ಒಳ್ಳೆಯದು. ಅನಿವಾರ್ಯತೆ ಇದ್ದಾಗ ಕೊಡೆ ಹಿಡಿದುಕೊಂಡು ಓಡಾಡಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರು ಕುಡಿಯಬೇಕು. ಮನೆಯಲ್ಲಿಯೇ ಮಾಡಿದ ತಂಪು ಪಾನೀಯಗಳು ಸೇವಿಸಬೇಕು. ಹಾಗೆಯೇ ಜಾನುವಾರುಗಳಿಗೆ ಹೆಚ್ಚಿನ ನೀರು ಕುಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.