ಬೀದರ್ | ಕನ್ನಡದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ : ಶ್ರೀನಿವಾಸ್

Update: 2025-03-19 19:13 IST
ಬೀದರ್ | ಕನ್ನಡದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ : ಶ್ರೀನಿವಾಸ್
  • whatsapp icon

ಬೀದರ್ : ಎಲ್ಲಾ ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೇಷ್ಠವಾಗಿದ್ದು, ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆ, ನಾಡು, ನುಡಿ ಹಾಗೂ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ವ್ಯವಸ್ಥಾಪಕ ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.

ಇಂದು ಎಫ್ ಪಿ ಏ ಐ ಸಭಾಂಗಣದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಜರಾ ಶಿಕ್ಷಣ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆ ಜಾಗೃತಿ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಇಂದಿನ ಮಕ್ಕಳು ಕನ್ನಡವನ್ನು ಮರೆಯುತ್ತಿದ್ದಾರೆ. ಅರ್ಧಂಬರ್ದ ಇಂಗ್ಲಿಷ್ ಕಲಿತು ಯಾವ ಭಾಷೆಯಲ್ಲಿಯೂ ಪರಿಣತಿ ಹೊಂದದೆ ತಮ್ಮ ಮುಂದಿನ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಇದನ್ನು ಆಲೋಚಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ತಿಳಿಸಿದರು.

ಮಂಜರಾ ಶಿಕ್ಷಣ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಶಿವಕುಮಾರ್ ಬೆಳ್ಳೂರೆ ಮಾತನಾಡಿ, ನಮ್ಮ ಜಿಲ್ಲೆಯು ಗಡಿಭಾಗದಲ್ಲಿದ್ದುದರಿಂದ ಕನ್ನಡದೊಂದಿಗೆ ತೆಲುಗು, ಉರ್ದು, ಮರಾಠಿ, ಹಿಂದಿ ಹಾಗೂ ಇತರೆ ಮುಂತಾದ ಭಾಷೆಗಳು ಇಲ್ಲಿ ಮಾತಾಡುವುದರಿಂದ ಕನ್ನಡ ಮರೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ಎಲ್ಲರೊಂದಿಗೆ ಕನ್ನಡ ಮಾತನಾಡಲು ರೂಡಿಸಿಕೊಳ್ಳಬೇಕು. ಇತರನ್ನು ಕನ್ನಡದಲ್ಲಿ ಮಾತನಾಡಲು ಜಾಗೃತಿ ಮೂಡಿಸಬೇಕು. ಎಲ್ಲರಲ್ಲಿ ಭಾಷಾಭಿಮಾನ ಬೆಳೆದಾಗ ಮಾತ್ರ ಕನ್ನಡವು ಉಳಿಯುತ್ತದೆ ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಸೂರ್ಯಕಾಂತ್ ಸಂಗೋಳ್ಕರ್ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಕೇವಲ ವೇದಿಕೆಗೆ ಸೀಮಿತವಾಗಿರಬಾರದು. ಪ್ರಾಥಮಿಕ ಶಿಕ್ಷಣದಿಂದ ಹತ್ತನೆ ತರಗತಿವರೆಗೆ ಕಡ್ಡಾಯವಾಗಿ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಸೇರಿಸಬೇಕು. ಹಾಗೆಯೇ ನಮ್ಮ ಕಲೆ, ಸಂಸ್ಕೃತಿ ಉಳಿಸಲು ಕನ್ನಡ ಮನಸುಗಳು ನಿರಂತರವಾಗಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವಣ್ಣ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಖಂಡ್ರೆ, ಸಂಜುಕುಮಾರ್ ಪೋಶೆಟ್ಟಿ, ಭೀಮ್ ಹಾಗೂ ಯೋಗೇಶ್ ಸೇರಿದಂತೆ ವಿದ್ಯಾರ್ಥಿ ಮತ್ತು ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News