ಬೀದರ್ | ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಮುಂದೂಡಿಕೆ : ಡಾ.ಅಬ್ದುಲ್ ಖಾದೀರ್

Update: 2025-04-23 18:55 IST
ಬೀದರ್ | ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಮುಂದೂಡಿಕೆ : ಡಾ.ಅಬ್ದುಲ್ ಖಾದೀರ್
  • whatsapp icon

ಬೀದರ್ : ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಗೊಳಿಸಿರುವುದನ್ನು ವಿರೋಧಿಸಿ ಜಂಟಿ ಕ್ರಿಯಾ ಸಮಿತಿಯು ನಗರದಲ್ಲಿ ಎ.24 ರಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಕಾಶ್ಮೀರದ ಪಹಲ್ಗಾಮ್‍ ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪ್ರತಿಭಟನೆಯು ಮುಂದೂಡಲಾಗಿದೆ ಎಂದು ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಡಾ.ಅಬ್ದುಲ್ ಖದೀರ್ ಅವರು ತಿಳಿಸಿದ್ದಾರೆ.

ಇಂದು ನಗರದ ಜಾಮಾ ಮಸೀದಿಯಲ್ಲಿ ತುರ್ತು ಸಭೆ ನಡೆಸಿದ ಮುಸ್ಲಿಮ್ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಪ್ರತಿಭಟನೆ ಮುಂದೂಡುವ ನಿರ್ಣಯ ಕೈಗೊಂಡರು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನಿರ್ದೇಶನದ ಮೇರೆಗೆ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಘಟನೆಯನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಪ್ರವಾಸಿಗರ ಮೇಲಿನ ದಾಳಿ ಅಮಾನವೀಯವಾದದ್ದು. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಸೇರಿದಂತೆ ದೇಶದ ಎಲ್ಲರೂ ಸಂತ್ರಸ್ತ ಕುಟುಂಬಗಳ ಪರ ನಿಲ್ಲಲಿದ್ದಾರೆ. ಅವರ ದುಃಖದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಸದಸ್ಯ ಮನ್ಸೂರ್ ಅಹಮ್ಮದ್ ಖಾದ್ರಿ, ಪ್ರಮುಖರಾದ ಸರ್ಫರಾಜ್ ಹಾಸ್ಮಿ, ಅಬ್ದುಲ್ ಅಜೀಜ್ ಮುನ್ನಾ, ಮೌಲಾನಾ ಮೋನಿಸ್ ಕಿರ್ಮಾನಿ, ಡಾ.ಜಿಯಾವುಲ್ ಇಸ್ಲಾಂ ಕುಂಜೆನಶೀನ್, ಬೀದರ್ ನಗರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮ್ಮದ್ ಯುಸೂಫ್ ಹಾಗೂ ರಫೀಕ್ ಅಹಮ್ಮದ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News