ಬೀದರ್ | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಎ.24ರಂದು ಪ್ರತಿಭಟನೆ : ಅಬ್ದುಲ್ ಖಾದೀರ್

ಬೀದರ್ : ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಗೊಳಿಸಿರುವುದನ್ನು ವಿರೋಧಿಸಿ ಎ.24 ರಂದು ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿ ಜಂಟಿ ಕ್ರಿಯಾ ಸಮಿತಿಯು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಮಿತಿಯ ಸಂಚಾಲಕ ಹಾಗೂ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಅಬ್ದುಲ್ ಖಾದೀರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿ ಖಂಡಿಸಿ ಪ್ರತಿಭಟನೆಗೆ ಎಲ್ಲ ಮುಸ್ಲಿಮ್ ಸಂಘಟನೆಗಳು ಹಾಗೂ ನಾಗರಿಕರನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ರಚಿಸಿದ್ದು, ಸಮಿತಿಯ ನಿರ್ಣಯದಂತೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಜಾಮಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ಮುಹಮದ್ ಗಾವಾನ್ ಚೌಕ್, ಮುಖ್ಯರಸ್ತೆ, ಕ್ರಾಂತಿ ಗಣೇಶ್ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ತಲುಪಿ ಅಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಯಿಂದಾಗಿ ವಕ್ಫ್ ಆಸ್ತಿ ಸರ್ಕಾರದ ಪಾಲಾಗಲಿದೆ. ಮುಸ್ಲಿಮ್ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಮೊಟಕುಗೊಳ್ಳಲಿವೆ. ಮುಸ್ಲಿಮರನ್ನು ದಮನಿಸುವ ಉದ್ದೇಶ ಹೊಂದಿರುವ ಈ ಕಾಯ್ದೆಯು ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕಾಯ್ದೆಯು ಸಂವಿಧಾನ ನೀಡಿರುವ ಹಲವು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಸಂವಿಧಾನದ ಕಲಂ 14, 15, 25, 26 ಹಾಗೂ 29 ಕ್ಕೆ ಇದು ಸಂಪೂರ್ಣವಾಗಿ ವಿರುದ್ಧವಾಗಿದ್ದು, ಈ ಕಾಯ್ದೆಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸುಪ್ರೀಂಕೋರ್ಟ್‍ನಲ್ಲಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ..
ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಹಾಗೂ ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಹೊಂದಿರುವ ಪ್ರಜ್ಞಾವಂತ ನಾಗರಿಕರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.